ವೀರಾಜಪೇಟೆ, ಮೇ 3: ವಿವಿಧ ಕ್ರೀಡೆಗಳಲ್ಲಿ ನೈಪುಣ್ಯತೆಯನ್ನು ಹೊಂದಿರುವ ಜನಾಂಗದ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ಹಾಗೂ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಕೌಟುಂಬಿಕ ಷಟಲ್ ಬ್ಯಾಡ್‍ಮಿಂಟನ್ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಕಂಜಿತಂಡ ಕುಟುಂಬದ ಅಧ್ಯಕ್ಷ ಕಂಜಿತಂಡ ಮಣಿ ಅಯ್ಯಪ್ಪ ಹೇಳಿದರು.
ಕಂಜಿತಂಡ ಕುಟುಂಬವು ಸಮೀಪದ ಬಿಟ್ಟಂಗಾಲದಲ್ಲಿನ ಹೆಲ್ತ್ ಕ್ಲಬ್‍ನ ತಂಗಾಳಿ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕೊಡವ ಕೌಟುಂಬಿಕ ಷಟಲ್ ಬ್ಯಾಡ್ಮಿಂಟನ್ ಟೂರ್ನಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹಾಕಿಯನ್ನು ಹೊರತು ಪಡಿಸಿ ಜನಾಂಗದ ಕ್ರೀಡಾಪಟುಗಳು ಬೇರೆಬೇರೆ ಕ್ರೀಡೆಯಲ್ಲಿಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಉಳಿದ ಕ್ರೀಡೆಗಳ ಕ್ರೀಡಾಪಟುಗಳಿಗೂ ಉತ್ತೇಜನ ನೀಡುವ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಕೌಟುಂಬಿಕ ಷಟಲ್ ಟೂರ್ನಿಯನ್ನು ಏರ್ಪಡಿಸಲಾಗಿದೆ ಎಂದರು.
ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್‍ನ ಮಾಜಿ ಆಟಗಾರ್ತಿ ಜ್ಯೋತಿ ಸೋಮಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕಂಜಿತಂಡ ಕುಟುಂಬದ ಹಿರಿಯರಾದ ಅಯ್ಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ಟೂರ್ನಿಯ ಸಂಚಾಲಕ ಕಂಜಿತಂಡ ಮಂದಣ್ಣ, ಚೇಂದ್ರಿಮಾಡ ಗಣಪತಿ ಮತ್ತಿತರರು ಇದ್ದರು.
ಟೂರ್ನಿಯಲ್ಲಿ 76 ಕುಟುಂಬಗಳ ತಂಡಗಳು ಭಾಗವಹಿಸಲಿವೆ. ಒಂದು ಕುಟುಂಬದಿಂದ ಒಂದು ಡಬಲ್ಸ್ ತಂಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮೊದಲ ಮೂರು ಸ್ಥಾನ ಪಡೆದ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವದು ತಾ.5ರಂದು ಸಂಜೆ ಟೂರ್ನಿಯ ಅಂತಿಮ ಫೈನಲ್ಸ್ ಪಂದ್ಯಾಟ ಹಾಗೂ ಸಮಾರೋಪ ನಡೆಯಲಿದೆ ಎಂದು ಕಂಜಿತಂಡ ಮಂದಣ್ಣ ಹೇಳಿದರು.