ಮಡಿಕೇರಿ, ಮೇ 3: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಇಂದಿನಿಂದ ಆರಂಭಗೊಂಡಿರುವ ಗೌಡ ಜನಾಂಗದ ಗೌಡ ಕ್ರಿಕೆಟ್ ಹಬ್ಬದಲ್ಲಿಂದು ನಡೆದ ಪಂದ್ಯಾವಳಿಯಲ್ಲಿ ಕೆ.ಡಿ.ಕೆ. ಬಾಯ್ಸ್, ಪೊನ್ನಚನ ಸೇರಿದಂತೆ ಶೇಖ ನೂಜಿಬೈಲು, ಕಾಫಿ ಲವರ್ಸ್, ಕೋಳಿಬೈಲು, ಕಾಂತೂರು ಪ್ಯಾಂಥರ್ಸ್ ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಎಫ್‍ಎಂಸಿ ವಾರಿಯರ್ಸ್ ತಂಡ 5 ವಿಕೆಟ್‍ಗೆ 104 ರನ್ ಗಳಿಸಿದರೆ, ಆರ್‍ಸಿಬಿ ಮಡಿಕೇರಿ ತಂಡ 6 ವಿಕೆಟ್‍ಗೆ ಕೇವಲ 55 ರನ್ ಗಳಿಸಿ 49 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕೆಡಿಕೆ ಗೌಡ ಸಮಾಜ ಬೆಂಗಳೂರು ತಂಡ 7 ವಿಕೆಟ್‍ಗೆ 55 ರನ್‍ಗಳಿಸಿದರೆ, ಫ್ರೆಂಡ್ಸ್ ಯುನೈಟೆಡ್ ಬೈನೆರವನ ತಂಡ 5 ವಿಕೆಟ್‍ಗೆ 85 ರನ್ ಗಳಿಸಿ ಪಂದ್ಯ ಸಮನಾಗಿಸಿಕೊಂಡಿತು. ನಂತರ ನೀಡಲಾದ ಸೂಪರ್ ಓವರ್‍ನಲ್ಲಿ ಕೆಡಿಕೆ ತಂಡ ಜಯಗಳಿಸಿತು. ಗೌಡ ಫುಟ್‍ಬಾಲ್ ಅಕಾಡೆಮಿ ಮರಗೋಡು ತಂಡ 10 ವಿಕೆಟ್‍ಗೆ 57 ರನ್ ಗಳಿಸಿದರೆ, ಪೊನ್ನಚನ ತಂಡ ಕೇವಲ ಎರಡು ವಿಕೆಟ್ ಕಳೆದುಕೊಂಡು ಗುರಿ ತಲಪಿತು. ಕಾಫಿ ಲವರ್ಸ್ ತಂಡ ಪೂಜಾರಿರ ತಂಡದ ವಿರುದ್ಧ 2 ವಿಕೆಟ್‍ಗೆ 91 ರನ್ ಪೇರಿಸಿದರೆ, ಪೂಜಾರಿರ ತಂಡ 5 ವಿಕೆಟ್‍ಗೆ 56 ರನ್ ಗಳಿಸಿ, 35 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕಾಫಿ ಲವರ್ಸ್ ತಂಡದ ಕೊಳಂಬೆ ಮಧು ಔಟಾಗದೆ 49 ರನ್ ಗಳಿಸಿ ಗಮನ ಸೆಳೆದರು.

ವೈಲ್ಡ್ ಕ್ಯಾಟ್, ಶ್ರೀಮಂಗಲ ತಂಡ 6 ವಿಕೆಟ್‍ಗೆ 58 ರನ್ ಗಳಿಸಿದರೆ, ಫ್ರೆಂಡ್ಸ್ ಗೋಲ್ಡ್ ಕ್ಲಬ್ ಬಿ. ಬಾಡಗ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 61 ರನ್ ಗಳಿಸಿ ವಿಜಯಿಯಾಯಿತು. ಫ್ರೆಂಡ್ಸ್ ಕ್ಲಬ್‍ನ ಕೊಡಗನ ರಾಖೇಶ್ ಔಟಾಗದೇ 17 ಎಸತಗಳಲ್ಲಿ 55 ರನ್ ಗಳಿಸಿ ಗಮನ ಸೆಳೆದರು.

ಮುಂದಿನ ಪಂದ್ಯಾಟದಲ್ಲಿ ಎಫ್‍ಎಂಸಿ ವಾರಿಯರ್ಸ್ ತಂಡ 7 ವಿಕೆಟ್‍ಗೆ 88 ರನ್ ಗಳಿಸಿದರೆ, ಕೋಳಿಬೈಲು ತಂಡ 1 ವಿಕೆಟ್ ನಷ್ಟಕ್ಕೆ 92 ರನ್‍ಗಳ ಗೆಲವು ಸಾಧಿಸಿತು. ಕೋಳಿಬೈಲು ಕೌಶಿಕ್ ಔಟಾಗದೆ 42 ರನ್ ಗಳಿಸಿ ಗಮನ ಸೆಳೆದರು. ಪೊನ್ನಚನ ತಂಡ 8 ವಿಕೆಟ್‍ಗೆ 67 ರನ್ ಗಳಿಸಿದರೆ, ಫ್ರೆಂಡ್ಸ್ ಗೋಲ್ಡ್ ಕ್ಲಬ್ ಬಿ. ಬಾಡಗ ತಂಡ 6 ವಿಕೆಟ್‍ಗೆ 66 ರನ್ ಗಳಿಸಿ ಕೇವಲ ಒಂದು ರನ್‍ಗಳ ಅಂತರದಿಂದ ಸೋಲನುಭವಿಸಿತು. ಕಾಂತೂರು ಪ್ಯಾಂಥರ್ಸ್ ತಂಡ 3 ವಿಕೆಟ್‍ಗೆ 45 ರನ್ ಗಳಿಸಿದರೆ, ಎಂಆರ್‍ಸಿ ಮರಂದೋಡ ತಂಡ 4 ವಿಕೆಟ್‍ಗೆ 44 ರನ್ ಗಳಿಸಿ ಕೇವಲ 1 ರನ್‍ಗಳ ಅಂತರದಿಂದ ಸೋಲನುಭವಿಸಿತು.

ನೂಜಿಬೈಲು ತಂಡ 2 ವಿಕೆಟ್‍ಗೆ 56 ರನ್ ಗಳಿಸಿದರೆ, ಕೆಡಿಕೆ ಗೌಡ ಸಮಾಜ ತಂಡ 6 ವಿಕೆಟ್‍ಗೆ 54 ರನ್ ಗಳಿಸಿ ಸೋಲನುಭವಿಸಿತು. ಕೂರ್ಗ್ ಹಂಟರ್ಸ್ ತಂಡ 6 ವಿಕೆಟ್‍ಗೆ 40 ರನ್ ಗಳಿಸಿದರೆ, ಕೆಡಿಕೆ ಬಾಯ್ಸ್ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಕಾವೇರಿ ಜನ್ಮ ಭೂಮಿ ತಂಡ 7 ವಿಕೆಟ್‍ಗೆ 46 ರನ್ ಗಳಿಸಿದರೆ, ನೂಜಿಬೈಲು ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು.