*ಗೋಣಿಕೊಪ್ಪಲು, ಮೇ 3: ಲೋಕಸಭಾ ಚುನಾವಣೆಯ ನಂತರದ ವಾತಾವರಣ ಬಿಜೆಪಿ ಪರವಾಗಿದೆ. ಗುಪ್ತ ಮಾಹಿತಿಗಳ ಪ್ರಕಾರ 20-22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸುತ್ತದೆ ಎಂಬ ಮಾಹಿತಿ ಇದೆ. ಈ ಎಲ್ಲಾ ಹಿನ್ನೆಲೆ ಮತ್ತೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂಬ ಆತ್ಮ ವಿಶ್ವಾಸ ಇದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾಲೋಚನ ಸಭೆಯಲ್ಲಿ ಮಾತನಾಡಿದರು. ಅತ್ಯಂತ ಸವಾಲಿನ ಮತ್ತು ಆತ್ಮವಿಮರ್ಶೆ ಮಾಡಿ ಕೊಳ್ಳಬೇಕಾದ ಚುನಾವಣೆಯನ್ನು ಎದುರಿಸಿದ್ದೇವೆ. ತಾ. 23 ರಂದು ನಮ್ಮ ಎಲ್ಲಾ ಶ್ರಮಕ್ಕೆ ಫಲ ದೊರಕಲಿದೆ ಎಂದು ಹೇಳಿದರು.

ದೇಶದ ಪ್ರಧಾನಮಂತ್ರಿಯನ್ನು ಏಕವಚನದಲ್ಲಿ ಕರೆದಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಅವರ ಅಜ್ಞಾನವನ್ನು ತೋರಿಸುತ್ತಿದೆ. ಮಾಜಿ ಪ್ರದಾನಿ ದೇವೇಗೌಡರು ಸಹ ಮಾತನಾಡುತ್ತಿರುವದು ಸೋಲುವ ಹತಾಶೆಯ ನುಡಿಗಳಾಗಿವೆ ಎಂದು ಈ ಸಂದರ್ಭ ಹೇಳಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ ಚುನಾವಣೆಯ ನಂತರ ದೇಶದ ವಾತಾವರಣವೇ ಬದಲಾಗಿದೆ. 545 ಕ್ಷೇತ್ರಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸುವ ಭರವಸೆ ಇದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಮಾತನಾಡಿ, ಕಳಂಕವಿಲ್ಲದ ಆಡಳಿತ ನಡೆಸಿದ ಮೋದಿ ಸರ್ಕಾರದ ಬಗ್ಗೆ ಜನ ವಿಶ್ವಾಸ ಇಟ್ಟಿದ್ದಾರೆ.

ಹೀಗಾಗಿ ಮತ್ತೆ ಮೋದಿ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಮೋದಿ ಪ್ರಭಾವ ಬೀರಿದ್ದು, ವಿರೋಧ ಪಕ್ಷದವರೇ ಬಿಜೆಪಿಗೆ ಮತ ನೀಡಿದ್ದಾರೆ ಎಂದರು.

ರಾಜ್ಯ ಬಿಜೆಪಿ ಸದಸ್ಯೆ ರೀನಾ ಪ್ರಕಾಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ಯುವ ಮೋರ್ಚಾ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ತಾ.ಪಂ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಸದಸ್ಯರುಗಳಾದ ಜಯ ಪೂವಯ್ಯ, ಪ್ರಕಾಶ್, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಆರ್.ಎಂ.ಸಿ. ಅಧ್ಯಕ್ಷ ವಿನು ಚಂಗಪ್ಪ ಹಿರಿಯರಾದ ಕಾಳಪಂಡ ಸುಧೀರ್, ಕಾಫಿ ಬೋರ್ಡ್ ನಿರ್ದೇಶಕ ಬೊಟ್ಟಂಗಡ ರಾಜು, ತಾಲೂಕು ಪ್ರಧಾನ ಕಾರ್ಯ ದರ್ಶಿ ಲಾಲ ಭೀಮಯ್ಯ, ಸುವಿನ್ ಗಣಪತಿ ಮತ್ತು ಜಿ,ಪಂ ಸದಸ್ಯರು ಗಳಾದ ಅಚ್ಚಪಂಡ ಮಹೇಶ್, ಭವ್ಯ, ಶಶಿಸುಬ್ರಮಣಿ, ಹಿಂದುಳಿದ ವರ್ಗ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.