ಸಿದ್ದಾಪುರ, ಮೇ 3: ಮಾಹಾ ಮಳೆಗೆ ಸಿಲುಕಿ ಹಾನಿಗೊಳಗಾದ ಕರಡಿಗೋಡು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಕುಟುಂಬಗಳು ಕಾವೇರಿ ನದಿಯ ಪ್ರವಾಹಕ್ಕೆ ತುತ್ತಾಗಿ ತತ್ಕಾಲಿಕವಾಗಿ ಪರಿಹಾರ ಕೇಂದ್ರದಲ್ಲಿ ಅಶ್ರಯ ಪಡೆದು ನಂತರ ತಮ್ಮ ನಿವಾಸಗಳಿಗೆ ಹಿಂದಿರು ಗುತಿರುವದು ಸಾಮಾನ್ಯವಾಗಿದೆ. ಈ ಹಿಂದಿನ ವರ್ಷಗಳ ಮಳೆಗಾಲದಲ್ಲಿ ಗಂಭೀರ ಸಮಸ್ಯೆಗಳು ಎದುರಾದಾಗಲೆ ಪ್ರವಾಹಕ್ಕೆ ಸಿಲುಕಿ ನೂರಾರು ಮಂದಿ ಹಾನಿಗೊಳಗಾಗಿ ಮೂವತ್ತಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನೆಲಕಚ್ಚಿತ್ತು ಅಲ್ಲದೆ ನದಿದಡದ ನಿವಾಸಿಗಳ ಮುಂದೆ ಸೂರು ಕಳೆದುಕೊಂಡು ಮುಂದಿನ ಜೀವನದ ಬಗ್ಗೆ ಚಿಂತಿಸತೊಡಗಿದ್ದಾರೆ. ವರ್ಷಂಪ್ರತಿ ಮಳೆಗಾಲ ಸಂದರ್ಭ ಪ್ರವಾಹದ ಹೊಡೆತಕ್ಕೆ ಸಿಲುಕಿ ಮನೆಗಳಿಗೆ ಅಶ್ರಯವಾಗಿದ್ದ ಬಿದಿರುಗಳು ಬುಡಮೇಲಾಗಿ ನೀರಿನಲ್ಲಿ ಕೊಚ್ಚಿ ಹೋದವು. ಪ್ರವಾಹ ಪೀಡಿತ ನದಿದಡವು ಕುಸಿಯಲು ಅರಂಭಿಸಿದೆ.

ಇಂತಹ ಮನೆಗಳಲ್ಲಿ ವಾಸ ಮಾಡಿಕೊಂಡು ದಿನದೂಡುತ್ತಾ ಜೀವನ ಸಾಗಿಸುತ್ತಿದ್ದ ನಿವಾಸಿಗಳು ಮಾಹಾಮಳೆಗೆ ಬೆಚ್ಚಿ ಬಿದ್ದಿದ್ದಾರೆ. ಹಾನಿಗೊಳಗಾದ ಮನೆಯಲ್ಲಿ ವಾಸ ಮಾಡಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದ್ದು, ಪ್ರಾಣ ಕೈಯಲ್ಲಿ ಹಿಡಿದುಕೊಂಡು ತಮ್ಮ ಸಂಸಾರ ದೊಂದಿಗೆ ದಿನದೂಡುತ್ತಿದ್ದಾರೆ. ಕಾವೇರಿ ನದಿಯ ಪ್ರವಾಹದ ಭಯದಿಂದ ನದಿದಡದ ನಿವಾಸಿಗಳು ಸಭೆ ನಡೆಸಿ ತಮಗೆ ಬದಲಿ ವ್ಯವಸ್ಥೆ ಕಲ್ಪಸಿದಲ್ಲಿ ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ ಎಂದು ತೀರ್ಮಾನಿಸಿ ಪಂಚಾಯಿತಿಗೆ ಮನವಿ ಪತ್ರ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದÀರ್ಭದಲ್ಲಿ ಮನವಿ ಪತ್ರ ಸಲ್ಲಿಸಲಾಗಿತ್ತು. ಜಿಲ್ಲಾಡಳಿತವು ಈ ಹಿನ್ನೆಲೆಯಲ್ಲಿ ನದಿದಡದ ನಿವಾಸಿಗಳನ್ನು ಸ್ಥಳಾಂತರಗೊಳಿಸುವ ಉದ್ದೇಶದಿಂದ ಸಿದ್ದಾಪುರ ಸಮೀಪದ ಘಟ್ಟದಹಳ್ಳ ಎಂಬಲ್ಲಿ ಒತ್ತುವರಿ ಸ್ಥಳವನ್ನು ವೀರಾಜಪೇಟೆ ತಹಶೀಲ್ದಾರ್ ಮುಂಖಾಂತರ ಸ್ವಾಧೀನಕ್ಕೆ ಪಡೆದುಕೊಂಡು ಮನೆ ನಿರ್ಮಾಣ ಮಾಡಿಕೊಡುವಂತೆ ಯೋಜನೆ ರೂಪಿಸಿದೆ. ಆದರೆ ಇದೀಗ ಎಂಟು ತಿಂಗಳು ಕಳೆದರೂ ನದಿದಡದ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆಯಾಗದೆ ಆತಂಕಕ್ಕೆ ಕಾರಣವಾಗಿದೆ.

ಮಳೆಗಾಲ ಅರಂಭವಾಗುವ ವೇಳೆ ನದಿದಡದ ನಿವಾಸಿಗಳು ಮತ್ತೆ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಮತ್ತಷ್ಟು ಅಪಾಯಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆ ಜಿಲ್ಲಾಡಳಿತವು ನದಿ ದಡದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿಕೊಡುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಇತರ ಜನಪ್ರತಿನಿಧಿಗಳು ಸ್ಪಂದಿಸಬೇಕು ಎಂದು ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ.

ಚಿತ್ರ ವರದಿ: ವಾಸು ಎ.ಎನ್