ಮಡಿಕೇರಿ ನಗರಸಭೆಯ ಸ್ವಯಂಘೋಷಿತ ಆಸ್ತಿ ತೆರಿಗೆ ವಿಷಯಕ್ಕೆ ಸಂಬಂಧಿಸಿದ ಗೊಂದಲದ ಬಗ್ಗೆ ವಿಚಾರಿಸಲು ಮೊನ್ನೆ ದಿನ ನಗರಸಭಾ ಆಯುಕ್ತ ರಮೇಶ್ ಅವರನ್ನು ಭೇಟಿಯಾಗಿದ್ದೆ. ಈ ಸಂದರ್ಭ ನಗರ ಹಳೇ ಬಸ್ ನಿಲ್ದಾಣದ ತಡೆಗೋಡೆ ನಿರ್ಮಿಸುವ ಕುರಿತು ಏನಾದರೂ ಬೆಳವಣಿಗೆ ಆಗಿದೆಯೇ ಎಂದು ವಿಚಾರಿಸಿದೆ.ಈಗಾಗಲೇ ಬೆಂಗಳೂರಿನ ಮೃತ್ಯುಂಜಯ ಎಂಬ ವ್ಯಕ್ತಿಗೆ ಕಾಮಗಾರಿ ಜವಾಬ್ದಾರಿ ವಹಿಸಿದ್ದು, 20 ರಿಂದ 30 ದಿನಗಳೊಳಗೆ ಪೂರ್ಣಗೊಳಿಸಲಿದ್ದಾರೆ ಎಂದು ಭರವಸೆಯ ಮಾತುಗಳನ್ನು ಆಡಿದರು. ಈ ಹಿಂದಿನವರಿಗಿಂತ ಅತೀ ಕಡಿಮೆ ವೆಚ್ಚ ಅಂದರೆ 1.04 ಕೋಟಿ ರೂಪಾಯಿಯಲ್ಲಿ ಜರ್ಮನ್ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಯಲಿದ್ದು, ಅತ್ಯುತ್ತಮ ಕಾಮಗಾರಿ ನಡೆಯಲಿರುವದೆಂದು ತಿಳಿಸಿದರು. ನಂತರ ಹಣಕಾಸು ವ್ಯವಸ್ಥೆಯನ್ನು ಅವಲಂಭಿಸಿ ಅದನ್ನು ಮಡಿಕೇರಿ ಸ್ಕ್ವೇರ್ ಆಗಿ ಪರಿವರ್ತಿಸಬಹುದೆಂದು ವಿವರಿಸಿದರು. ಈ ಬಗ್ಗೆ ತಾನು ಈಗಾಗಲೇ ಖಾಸಗಿ ಚಾನಲ್‍ವೊಂದಕ್ಕೆ ಸಂದರ್ಶನ ನೀಡಿ ಮಾಹಿತಿ ಒದಗಿಸಿರುವದಾಗಿಯೂ ತಿಳಿಸಿದರು.ನಿಟ್ಟುಸಿರು ಬಿಟ್ಟ ನಾನು, ಗುತ್ತಿಗೆದಾರ ಮೃತ್ಯುಂಜಯರವರ ದೂರವಾಣಿ ಸಂಖ್ಯೆ ಪಡೆದು ಕಚೇರಿಗೆ ಬಂದು ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ದೆಹಲಿಯಲ್ಲಿ ಇರುವದಾಗಿ ತಿಳಿಸಿದರು. ಸ್ವಲ್ಪ ಸಮಯದ ಬಳಿಕ ಅವರೇ ದೂರವಾಣಿ ಕರೆ ಮಾಡಿದಾಗ ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಬಯಸಿದೆ. ಅವರ ಮಾತಿನಿಂದ ಗಾಬರಿ ಆಯಿತು! ಆ ವ್ಯಕ್ತಿ ತಾನು ಇದುವರೆಗೂ ಯಾವದೇ ಅಂದಾಜು ಪಟ್ಟಿ ಕೂಡ ನೀಡಿಲ್ಲವೆಂದೂ, ಸದ್ಯದ ಪರಿಸ್ಥಿತಿಯಲ್ಲಿ ತಾನು ಕೆಲಸವನ್ನು ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲವೆಂದೂ ಹೇಳಿದರು.

ಈ ಕಾಮಗಾರಿಗೆ ಕನಿಷ್ಟ 2.5 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಅದು ಕೂಡ ನಿಖರವಾದ ದರವಲ್ಲವೆಂದೂ, ತಮ್ಮ ದರವನ್ನು ಒಪ್ಪಿ ನಗರಸಭೆ ಕೆಲಸದ ಆದೇಶ ನೀಡಿದರೆ ಯಂತ್ರೋಪಕರಣ ಬರಲು ಕನಿಷ್ಟ 20 ದಿನಗಳು ಬೇಕಾಗುವದೆಂದು ವಿವರಿಸಿದರು. ಆನಂತರ ಕಾಮಗಾರಿಗೆ ಕನಿಷ್ಟ 40 ದಿನಗಳ ಕಾಲಾವಕಾಶ ಬೇಕಿದ್ದು, ಮಳೆಗಾಲ ಸಮೀಪಿಸುವದರಿಂದ ತಾನು ಈ ಕೆಲಸವನ್ನು ನಿರ್ವಹಿಸುವದು ಕಷ್ಟವೆಂದು ಸ್ಪಷ್ಟವಾಗಿ ನುಡಿದರು.

ನನ್ನ ಪ್ರಶ್ನೆ

* ಇದೆಲ್ಲಾ ಗೊತ್ತಿದ್ದೂ ನಗರಸಭಾ ಆಯುಕ್ತರು ಮಾಧ್ಯಮಗಳಿಗೆ ನೀಡಿದ ಮಾಹಿತಿ ತಪ್ಪೆ? ಅಥವಾ ಅವರಿಗೂ ಮಾಹಿತಿಯ ಕೊರತೆ ಇದೆಯೋ?

* ಡಿಸೆಂಬರ್ 20 ರಂದು ಬೆಂಗಳೂರಿನ ಬಿ.ಎಂಎಸ್ ಇಂಜಿನಿಯರಿಂಗ್ ಕಾಲೇಜಿನ ನೆರವು ಪಡೆದು ಮಣ್ಣು ಪರೀಕ್ಷೆ ನಡೆಸಿದ್ದ ನಿವೃತ್ತ ಪಿಡಬ್ಲ್ಯೂಡಿ ಇ.ಇ. ಸತ್ಯನಾರಾಯಣ ರಾವ್ ತಂಡ ನೀಡಿದ್ದ ವರದಿಯನ್ನು ಪುರಸ್ಕರಿಸಲಿಲ್ಲವೇಕೆ?

* ಇದೇ ತಂಡ ಕೇವಲ 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಮುಗಿಸುವದಾಗಿ ಅಂದಾಜು ಪಟ್ಟಿ ನೀಡಿದ್ದರೂ ಅವರನ್ನು ಕರೆಯಿಸಿ ಮಾತನಾಡುವದಾಗಲಿ, ಕೆಲಸಕ್ಕೆ ಅವಕಾಶ ಕಲ್ಪಿಸುವದಾಗಲಿ ಮಾಡದಿರಲು ಉಂಟಾದ ಅಡಚಣೆ ಏನು? ಕಾರಣವೇನು?

* ಚುನಾವಣಾ ನೀತಿ ಸಂಹಿತೆ ಇದ್ದರೂ ಇದೊಂದು ತುರ್ತು ಕೆಲಸವೆಂದು ಪರಿಗಣಿಸಿ ವಿಶೇಷ ಅನುಮತಿ ಯಾಕೆ ಪಡೆಯಲಿಲ್ಲ?

* ಇತ್ತೀಚಿನ ಎರಡು ಮಳೆಗೇ ಈ ಜಾಗದಲ್ಲಿ ಮಣ್ಣು ಕೊರೆತ ಉಂಟಾಗಿರುವದನ್ನು ಸಂಬಂಧಿಸಿದವರು ಗಮನಿಸಿದ್ದಾರೆಯೇ?

* ಈ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳುವಂತೆ ಸಾರ್ವಜನಿಕರು ಲಿಖಿತವಾಗಿ ಮನವಿ ಸಲ್ಲಿಸಿದ್ದರೂ, ಈ ಬಗ್ಗೆ ಕೈಗೊಂಡ ಕ್ರಮಗಳೇನು?

* ಕೇವಲ 20-25 ದಿನಗಳಲ್ಲಿ ಆರಂಭಗೊಳ್ಳಲಿರುವ ಮಳೆಯಿಂದ ಈ ಭಾಗದಲ್ಲಿ ತೊಂದರೆಯಾಗದಂತೆ ಕೈಗೊಂಡಿರುವ ಕ್ರಮಗಳೇನು?

* ಇದೇ ಈ ಎಲ್ಲಾ ಆತಂಕಗಳ ನಡುವೆ ಜನರಿಗೆ ಮುಂದೆ ತೊಂದರೆ ಉಂಟಾದಲ್ಲಿ ಅದರ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವವರು ಯಾರು?