ವರದಿ-ಚಂದ್ರಮೋಹನ್ಕು ಶಾಲನಗರ, ಮೇ 04: ಕುಶಾಲನಗರ ಪಟ್ಟಣದಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆಗೆ ಸುಧಾರಣೆ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಮೂಲಕ ಹಲವು ಮಾರ್ಪಾಡುಗಳನ್ನು ಮಾಡಿದೆ. ಶೀಘ್ರಗತಿಯಲ್ಲಿ ಅಭಿವೃದ್ಧಿ ಕಾಣುತ್ತಿರುವ ಕುಶಾಲನಗರದಲ್ಲಿ ವಾಹನಗಳ ಸಂಚಾರ ಒತ್ತಡ ದಿನೇ ದಿನೇ ಏರಿಕೆಯಾಗುತ್ತಿದ್ದು ಇದರಿಂದ ಜನರಿಗೆ ಅನಾನುಕೂಲಗಳು ಕಂಡುಬಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಹಯೋಗದೊಂದಿಗೆ ಸಲ್ಲಿಸಿದ ಪ್ರಸ್ತಾವನೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾ ದಂಡಾಧಿಕಾರಿ ಗಳಾದ ಜಿಲ್ಲಾಧಿಕಾರಿಗಳ ಮೂಲಕ ಪಟ್ಟಣದ ಮುಖ್ಯರಸ್ತೆಯಲ್ಲಿ ಏಕಮುಖ ರಸ್ತೆ ಸಂಚಾರಕ್ಕೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275, ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ 91 ಮತ್ತು ಪಟ್ಟಣದ 4 ದಿಕ್ಕುಗಳಿಂದ ಕುಶಾಲನಗರ ಹೃದಯ ಭಾಗಕ್ಕೆ ಬಂದು ಸೇರುವ ರಸ್ತೆಯಲ್ಲಿ ದಿನನಿತ್ಯ ಹೆಚ್ಚಿನ ವಾಹನ ಸಂಚರಿಸುತ್ತಿದ್ದು ಸಂಚಾರ ವ್ಯವಸ್ಥೆ ಏರುಪೇರಾಗುತ್ತಿದೆ. ಕುಶಾಲನಗರ ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳಿಗೆಂದು ಬರುವ ಪ್ರವಾಸಿಗರು ನೆರೆಯ ಬೈಲುಕೊಪ್ಪ ಟಿಬೇಟಿಯನ್ ಶಿಬಿರಗಳಿಗೆ ಭೇಟಿ ನೀಡುವ ಪ್ರವಾಸಿಗರ ಒತ್ತಡ ಅಧಿಕಗೊಂಡಿದೆ. ವಾಹನ ದಟ್ಟಣೆ ಅಧಿಕವಾಗಿ ದಿನನಿತ್ಯ ವಾಹನ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ರಥಬೀದಿ ಮತ್ತು ಗಣಪತಿ ದೇವಾಲಯದ ಒತ್ತಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯನ್ನು (ಐಬಿ ರಸ್ತೆ) ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಏಕಮುಖ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲು ಕೋರಲಾಗಿತ್ತು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡ ಏಕಮುಖ ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಮೂಲಕ ನಾಗರಿಕರಿಗೆ ಅನುಕೂಲ ವಾಗುವದಲ್ಲದೆ ಸಂಭವನೀಯ ಅವಘಡಗಳನ್ನು ನಿಯಂತ್ರಿಸುವ ಉದ್ದೇಶ ಪೊಲೀಸ್ ಅಧಿಕಾರಿU Àಳದ್ದಾಗಿದೆ.

ಮೋಟಾರು ವಾಹನ ಕಾಯ್ದೆ 1998 ರ ವಿಧಿ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221 (ಎ)(5) ರಲ್ಲಿ ಜಿಲ್ಲಾ ದಂಡಾಧಿಕಾರಿ ಗಳು ಏಕಮುಖ ರಸ್ತೆಗೆ ಅಧಿಕೃತ ಆದೇಶ ನೀಡಿದ್ದಾರೆ. ಕುಶಾಲನಗರ ಕಾರ್ಯಪ್ಪ ಸರ್ಕಲ್ ಬಳಿ ಸುಮಾರು 30 ಮೀ ಸುತ್ತಳತೆಯ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿಷೇಧ ಮತ್ತು ಬೀದಿ ಬದಿ ವ್ಯಾಪಾರಿಗಳ ನಿಷೇಧಕ್ಕೆ ಅನುಮತಿ ಮತ್ತು ನಾಮಫಲಕ ಅಳವಡಿಸಲು ಅನುಮತಿಗೆ ಕೋರ ಲಾಗಿತ್ತು. ಗಣಪತಿ ದೇವಾಲಯದ ಬಳಿ ಐಬಿ ರಸ್ತೆಯಲ್ಲಿ ‘ನೋ ಎಂಟ್ರಿ ಬೋರ್ಡ್’

(ಮೊದಲ ಪುಟದಿಂದ) ಅಳವಡಿಸಲು ಅನುಮತಿ ಮತ್ತು ಇದೇ ರಸ್ತೆಯಲ್ಲಿ ಮಹಿಳಾ ಸಮಾಜದ ಕಟ್ಟಡದ ತನಕ ಪ್ರತಿ ತಿಂಗಳ 1 ರಿಂದ 15ನೇ ತಾರೀಖಿನ ತನಕ ಒಂದು ಕಡೆ ವಾಹನ ವ್ಯವಸ್ಥೆ ಕಲ್ಪಿಸುವದು, ನಂತರದ 15 ದಿನಗಳ ಕಾಲ ಬದಲೀ ವ್ಯವಸ್ಥೆ ಮತ್ತು 75 ಮೀಟರ್ ದ್ವಿಚಕ್ರ ವಾಹನ ನಿಲುಗಡೆ ಅಲ್ಲದೆ 75 ಮೀಟರ್ 4 ಚಕ್ರ ವಾಹನಗಳಿಗೆ ಅನುಮತಿ ಮತ್ತು ನಾಮಫಲಕ ಅಳವಡಿಸುವದೂ ಒಳಗೊಂಡಿದೆ.

ಅಲ್ಲದೆ, ಐಬಿ ರಸ್ತೆಯಲ್ಲಿ ಗಣಪತಿ ದೇವಾಲಯದಿಂದ ಸೂರ್ಯ ಪ್ರೆಸ್ ತನಕ 50 ಮೀ ವಾಹನ ನಿಲುಗಡೆ ನಿಷೇಧ, ಇದೇ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಿಂದ ಬೈಪಾಸ್ ರಸ್ತೆಗೆ ಸೇರುವ ಹಾಸ್ಟೆಲ್ ರಸ್ತೆಯನ್ನು ಏಕಮುಖ ರಸ್ತೆ ಮಾಡುವದು, ರಥಬೀದಿಯಲ್ಲಿ ಕನ್ನಿಕಾ ದೇವಾಲಯ ಆರ್ಚ್ ಗೇಟ್ ಬಲಬದಿಯಿಂದ ಸುಮಾರು 250 ಮೀಗಳ ಪೈಕಿ ತಿಂಗಳಲ್ಲಿ 15 ದಿನ ಎಡ ಮತ್ತು ಬಲ ಬದಿಯಲ್ಲಿ ಹಂತಹಂತವಾಗಿ 4 ಚಕ್ರದ ವಾಹನ ನಿಲುಗಡೆ, 50 ಮೀ ದ್ವಿಚಕ್ರ ವಾಹನ ನಿಲುಗಡೆಗೂ ಕೋರಿಕೆ ಸಲ್ಲಿಸಲಾಗಿತ್ತು.

ರಥಬೀದಿಯಲ್ಲಿ ಮೈಸ್ ಕಂಪ್ಯೂಟರ್ ಅಂಗಡಿಯಿಂದ ಮಂಜುನಾಥ ಮೆಡಿಕಲ್ ಶಾಪ್ ತನಕ ಕೆಲವು ಕಡೆ ವಾಹನ ನಿಷೇಧ, ಬೀದಿ ಬದಿ ವ್ಯಾಪಾರಿಗಳ ನಿಷೇಧಕ್ಕೆ ಅನುಮತಿ, ಆಂಜನೇಯ ದೇವಾಲಯದಿಂದ ಕೆಇಬಿ ಮೂಲಕ ಟೌನ್ ಕಾಲೋನಿ ಬಡಾವಣೆಗೆ ತೆರಳುವ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ, ಬೀದಿ ಬದಿ ವ್ಯಾಪಾರಿಗಳ ನಿಷೇದ, ಮಾರುಕಟ್ಟೆ ರಸ್ತೆಯ ಕೆಇಬಿ ಗೇಟ್ ಬಳಿ ಮಾರುಕಟ್ಟೆಯಲ್ಲಿ ಸಮರ್ಪಕ ವಾಹನ ನಿಲುಗಡೆ ಮತ್ತು ಸಂಚಾರ ವ್ಯವಸ್ಥೆ, ಕಾರ್ಯಪ್ಪ ಸರ್ಕಲ್‍ನಿಂದ ಮೈಸ್ ಕಂಪ್ಯೂಟರ್ ಅಂಗಡಿ ತನಕ ರಥಬೀದಿಯಲ್ಲಿ ಕಾರ್ಯಪ್ಪ ಸರ್ಕಲ್ ಕಡೆಗೆ ರಥಬೀದಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸುವದೂ ಒಳಗೊಂಡಿದೆ. ನಾಮಫಲಕ ಅಳವಡಿಸಲು ಅನುಮತಿ, ಮಾರುಕಟ್ಟೆ ಮುಂಭಾಗ 1ನೇ ಜಂಕ್ಷನ್‍ನಿಂದ 2ನೇ ಜಂಕ್ಷನ್ ತನಕ ಮುಖ್ಯರಸ್ತೆಯ ಎಡಬದಿಯಲ್ಲಿ ಆಟೋ ರಿಕ್ಷಾಗಳ ನಿಲುಗಡೆಗೆ ಅನುಮತಿ, ಬೈಪಾಸ್ ರಸ್ತೆಯ ಡಿವೈಎಸ್ಪಿ ಕಛೇರಿಯಿಂದ ಅರಣ್ಯ ಕಛೇರಿಗೆ ಹೋಗುವ ರಸ್ತೆಯ ಎಡಬದಿಯಲ್ಲಿ ವಾಹನ ನಿಲುಗಡೆ, ಬಲಬದಿಯಲ್ಲಿ ‘ನೋ ಪಾರ್ಕಿಂಗ್ ಬೋರ್ಡ್’ ಅಳವಡಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ ಜಿಲ್ಲಾ ದಂಡಾಧಿಕಾರಿಗಳು ಮತ್ತು ಕೊಡಗು ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಈ ಆದೇಶ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನದಿಂದ ಜಾರಿಗೆ ಬರುತ್ತದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ, ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಕಳೆದ ಎರಡು ತಿಂಗಳಿನಿಂದ ಕುಶಾಲನಗರದ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಗೆ ಕಾಯಕಲ್ಪ ಕಲ್ಪಿಸಲು ಹಲವು ರೀತಿಯಲ್ಲಿ ಕ್ರಮಕೈಗೊಳ್ಳಲು ಹಲವು ರೂಪುರೇಷೆಗಳನ್ನು ತಯಾರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ದಂಡಾಧಿಕಾರಿಯವರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧಿಸೂಚನೆ ಹೊರಡಿಸಿದ್ದಾರೆ. ತಕ್ಷಣದಿಂದಲೇ ಈ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಸ್ಥಳೀಯ ಸಂಚಾರಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೂಲಕ ಅನುಷ್ಠಾನಕ್ಕೆ ತರಲಾಗುವದು ಎಂದು ಡಿವೈಎಸ್ಪಿ ದಿನಕರ ಶೆಟ್ಟಿ ಮತ್ತು ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.