ಮಡಿಕೇರಿ, ಮೇ 2: ಜನಾಂಗದ ನಡುವೆ ಸಾಮರಸ್ಯ ವೃದ್ಧಿಗೆ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.ಕೊಡಗು ಗೌಡ ಯುವ ವೇದಿಕೆ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರಲ್ಲೂ ಕ್ರೀಡಾ ಮನೋಭಾವ ಇರಬೇಕು, ಆರೋಗ್ಯದ ಹಿತದೃಷ್ಟಿಯಿಂದ ಕ್ರೀಡೆಯೊಂದಿಗೆ ಯೋಗ, ವ್ಯಾಯಾಮಕ್ಕೆ ಒತ್ತು ನೀಡಬೇಕು. ಮಿತ ಆಹಾರ ಸೇವನೆಯೊಂದಿಗೆ ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು ಎಂದು ರಂಜನ್ ಸಲಹೆಯಿತ್ತರು.ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಕೊಡಗು ಪುಟ್ಟ ಜಿಲ್ಲೆಯಾದರೂ ಕ್ರೀಡೆ, ಸೇನೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ. ಇದು ಹೆಮ್ಮೆಯ ವಿಚಾರ ಎಂದರಲ್ಲದೆ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕೆಂದು ಹೇಳಿದರು.

ಅತಿಥಿಯಾಗಿದ್ದ ಶಿಕ್ಷಕಿ, ಸಮಾಜ ಸೇವಕಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ ಯುವ ಜನತೆ ದೇಶದ ಶಕ್ತಿಯಾಗಿದ್ದು, ದೇಶ ಕಟ್ಟುವ ಕೆಲಸದೊಂದಿಗೆ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಬೇರೆ ಜನಾಂಗದವರೊಂದಿಗೂ ಸಾಮರಸ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆಯಿತ್ತರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮಾತ ನಾಡಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕ್ರಿಕೆಟ್ ಹಬ್ಬವನ್ನು ಆಚರಿಸದಿರಲು ತೀರ್ಮಾನಿಸಲಾಗಿತ್ತಾದರೂ ಜನಾಂಗದ ಒಗ್ಗಟ್ಟಿಗೆ ಧಕ್ಕೆಯಾಗದಿರಲಿ ಎಂಬ ಕಾರಣಕ್ಕಾಗಿ ಸರಳವಾಗಿ ಕ್ರಿಕೆಟ್ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

(ಮೊದಲ ಪುಟದಿಂದ) ವೇದಿಕೆಯಲ್ಲಿ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ ಉಪಸ್ಥಿತರಿದ್ದರು.

ವಿನೋದ್ ನಿರೂಪಿಸಿ, ಜಾಗೃತಿ, ಬೆಳಕು ಪ್ರಾರ್ಥಿಸಿ, ಕಟ್ಟೆಮನೆ ಸೋನಾಜಿತ್ ಸ್ವಾಗತಿಸಿ, ರಿಷಿತ್ ಮಾದಯ್ಯ ವಂದಿಸಿದರು. ಸಮಾರಂಭದಲ್ಲಿ ಪುಲ್ವಾಮ ಧಾಳಿಯಲ್ಲಿ ಮೃತರಾದ ಯೋಧರಿಗೆ, ಶ್ರೀಲಂಕಾ ಬಾಂಬ್ ಧಾಳಿಯಲ್ಲಿ ಮೃತರಾದವರಿಗೆ ಹಾಗೂ ಕಳೆದ ಬಾರಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಸಾವನ್ನಪ್ಪಿದವರಿಗೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.