ಗೋಣಿಕೊಪ್ಪ ವರದಿ, ಮೇ 3 : ಅಮ್ಮ ಕೊಡವ ಜನಾಂಗಗಳ ನಡುವೆ ನಡೆಯುವ ಬಾನಂಡ ಕ್ರಿಕೆಟ್ ಕಪ್ ಟೂರ್ನಿ ತಾ. 4 ರಿಂದ (ಇಂದಿನಿಂದ) ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆರಂಭಗೊಳ್ಳಲಿದೆ, ಮೂರು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 23 ಅಮ್ಮಕೊಡವ ತಂಡಗಳು ಸೆಣೆಸಾಟ ನಡೆಸಲಿದೆ ಎಂದು ಅಖಿಲ ಅಮ್ಮಕೊಡವ ಸಮಾಜ ಗೌರವ ಅಧ್ಯಕ್ಷ ಬಾನಂಡ ಪ್ರಥ್ಯು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಬೆಳಗ್ಗೆ 9 ಗಂಟೆಗೆ ಅಲ್ಲಿನ ರಾಮ ಮಂದಿರದಿಂದ ಮೆರವಣಿಗೆ ಮೂಲಕ ಮೈದಾನಕ್ಕೆ ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವದು. 10 ಗಂಟೆಗೆ ಕ್ರೀಡಾಕೂಟವನ್ನು ಬೆಂಗಳೂರು ಶ್ರೀ ಸಂಸ್ಥಾನ ಗೋಕರ್ಣ ರಾಮಚಂದ್ರ ಪುರ ಮಠದ ಮಹಾ ಸ್ವಾಮೀಜಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಶಾಸಕ ಕೆ.ಜಿ. ಬೋಪಯ್ಯ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ , ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.