ಕೂಡಿಗೆ, ಮೇ 3: ರಾಜ್ಯ ಮಟ್ಟದ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಮಾಹಿತಿ ವಿನಿಮಯಕ್ಕೆ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರೇ ರೂಪಸಿಕೊಂಡಿರುವ ಮಿ2ವಿ ವಾಟ್ಸಾಪ್ ಗ್ರೂಪ್ ಹಾಗೂ ಕೂಡಿಗೆ ಗ್ರಾಮದ ಕೊಡಗು ಎಜುಕೇಷನಲ್ ಸ್ಕೂಲ್‍ನ ಸಹಯೋಗದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಕೊಡ್ಲಿಪೇಟೆಯ ಕಲ್ಮಠದ ಪೂಜ್ಯ ಮಹಂತ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಸ್ವಾಮೀಜಿ, ಅನುದಾನ ರಹಿತ ಶಾಲೆಗಳ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಶ್ರಮಿಸಬೇಕು. ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಇಂತಹ ಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಚಾರಗಳನ್ನು, ವಿನಿಮಯ ಮಾಡಿಕೊಂಡರೆ ಶಾಲಾ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ಸಹಕಾರಿ ಎಂದು ತಿಳಿಸಿದರು. ವಿಚಾರ ಸಂಕಿರಣದಲ್ಲಿ ಬೆಂಗಳೂರು, ತುಮಕೂರು, ಮಧುಗಿರಿ, ಹಾಸನ, ರಾಯಚೂರು, ಕಲ್ಬುರ್ಗಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಆಡಳಿತ ಮಂಡಳಿ ಮುಖ್ಯಸ್ಥರು ಶಾಲಾ ಆಡಳಿತಕ್ಕೆ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚಿಸಿದರು.

ಹಿರಿಯ ಮಾರ್ಗದರ್ಶಕರು ಕಾರ್ಯಕ್ರಮದಲ್ಲಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿ ಅನುದಾನ ರಹಿತ ಶಾಲೆಗಳ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ಪೆÇ್ರ. ಮನೋಹರ ದೇಶ್ ಮುಖ್, ಡಾ. ರುದ್ರಯ್ಯ ಹಿರೇಮಠ್, ಡಾ. ವಿನಾಯಕ ಸಿಂಧಗೆರೆ, ಕೃಷ್ಣಮೂರ್ತಿ, ಉಮಾ ಪ್ರಭಾಕರ್, ಪ್ರಭಾಕರ್ ಅರಸ್ ಮತ್ತಿತರರು ಇದ್ದರು.