ಸೂಕ್ತ ಕ್ರಮಕ್ಕೆ ಸ್ಥಳೀಯರ ಮನವಿ

ಮಡಿಕೇರಿ, ಮೇ 3: ಮಡಿಕೇರಿಯ ಕರ್ಣಂಗೇರಿ ಮತ್ತು ಹೆಬ್ಬೆಟ್ಟಗೇರಿ ಗ್ರಾಮಗಳು ಸೇರುವ ಸರಹದ್ದಿನ ಗುಂಡಿಬೈಲು ಎಂಬಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯ ಸಂದರ್ಭ ಕುಸಿದು ಬಿದ್ದ ಬೃಹತ್ ಪ್ರಮಾಣದ ಮಣ್ಣಿನ ರಾಶಿಯನ್ನು ಇನ್ನೂ ಕೂಡ ತೆರವುಗೊಳಿಸದೆ ಇರುವದರಿಂದ ಮಳೆ ನೀರು ಪ್ರವಾಹದ ಮಾದರಿಯಲ್ಲಿ ಶೇಖರಣೆಗೊಳ್ಳುವ ಅಪಾಯವಿದೆ. ಪ್ರಸ್ತುತ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಲು ಜಿಲ್ಲಾಡಳಿತ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳ ಪರವಾಗಿ ಸ್ಥಳೀಯರು ಹಾಗೂ ಹಿರಿಯರಾದ ಕೆ.ಎ. ಕಾರ್ಯಪ್ಪ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಕೆ. ನಿಡುಗಣೆ ಗ್ರಾ.ಪಂ.ಗೆ ಒಳಪಡುವ ಪಂಚಾಯಿತಿ ಕಚೇರಿಯಿಂದ ಪೂರ್ವಕ್ಕೆ ಅಂದಾಜು ಒಂದೂವರೆ ಕಿ.ಮೀ. ದೂರದಲ್ಲಿರುವ ಗುಂಡಿಬೈಲು ಗ್ರಾಮದಲ್ಲಿ ಕಳೆದ ಆಗಸ್ಟ್ ತಿಂಗಳ 16 ರಂದು ಮಹಾಮಳೆಗೆ ಜಲಸ್ಫೋಟಗೊಂಡು ಕರ್ಣಂಗೇರಿ ಗ್ರಾಮಕ್ಕೆ ಸೇರಿದ ಬೆಟ್ಟದ ಒಂದು ಪಾಶ್ರ್ವ ಕುಸಿದು ಸುಮಾರು ಐದಾರು ಎಕರೆ ಗದ್ದೆ ಬಯಲು ಪೂರ್ಣ ಮಣ್ಣಿನಿಂದ ಆವರಿಸಿದ್ದಲ್ಲದೇ ಸುಮಾರು ಹತ್ತು ಎಕರೆಗೂ ಮೇಲ್ಪಟ್ಟು ಗದ್ದೆಪೂರ್ತಿ ನೀರಿನಿಂದ ಮುಳುಗಡೆಯಾಗಿದೆ. ಕುಸಿದ ಮಣ್ಣು ಎರಡು ಬೆಟ್ಟಗಳ ನಡುವೆ ಬಿದ್ದ ಕಾರಣ ಅಣೆಕಟ್ಟು ರೀತಿಯಾಗಿ ನೀರು ಶೇಖರಣೆಗೊಂಡಿದೆ. ಸುಮಾರು ಹದಿನೈದರಿಂದ ಇಪ್ಪತ್ತು ಅಡಿಯಷ್ಟು ಎತ್ತರಕ್ಕೆ ನೀರು ನಿಂತಿರುವ ಸಾಧ್ಯತೆ ಇದೆ. ಕಳೆದ ಮಳೆಗಾಲದ ಆಗಸ್ಟ್ ತಿಂಗಳಲ್ಲಿ ಬಿದ್ದ ಮಳೆಗೆ ಕೊಡಗಿನಾದ್ಯಂತ ಭಾರೀ ಕಷ್ಟ, ನಷ್ಟ ಸಂಭವಿಸಿದ್ದರೂ ಜಿಲ್ಲಾಡಳಿತದಿಂದ ಅವುಗಳನ್ನೆಲ್ಲಾ ರಾತ್ರಿ ಹಗಲೆನ್ನದೆ ದುಡಿದು ರಕ್ಷಣೆ ಮಾಡಲಾಯಿತಾದರೂ ಈ ಪ್ರದೇಶದಲ್ಲಿ ಇಲ್ಲಿಯವರೆಗೂ ನಿಂತ ನೀರನ್ನು ಬಿಡಿಸಿ ಸುಗಮ ಹರಿಯುವಿಕೆಗೆ ಅನುವು ಮಾಡುವ ಕಾರ್ಯ ನಡೆದಿಲ್ಲ. ಇದನ್ನು ಸರಿಪಡಿಸಬೇಕೆಂಬ ಇಚ್ಛೆ ಯಾರಿಗೂ ಇದ್ದಂತೆ ಕಾಣುತ್ತಿಲ್ಲ ಎಂದು ಕಾರ್ಯಪ್ಪ ಆರೋಪಿಸಿದರು.

ಸ್ಥಳೀಯ ಕೆಲವು ಯುವಕರು ತುಂಬಿರುವ ನೀರನ್ನು ಬಿಡಿಸಲು ಪ್ರಯತ್ನಿಸಿದಾಗ ಕೆಲವರು ವಿನಾಕಾರಣ ಅಡ್ಡಿಪಡಿಸಿದ್ದಾರೆ. ಮಳೆಗಾಲ ಆರಂಭವಾದರೆ ಪ್ರಥಮವಾಗಿ ಇಲ್ಲಿಂದಲೇ ವಿಕೋಪ ಸಂಭವಿಸುವದರಲ್ಲಿ ಯಾವದೇ ಸಂಶಯವಿಲ್ಲ. ತುರ್ತು ಪರಿಸ್ಥಿತಿಯ ನಿರ್ವಹಣೆಗೆ ಈಗಾಗಲೇ ನೇಮಿಸಿರುವ ಸಮಿತಿಯನ್ನು ಇಲ್ಲಿಗೆ ಮೊದಲು ನಿಯೋಜಿಸಿದರೆ ಉತ್ತಮವೆಂದು ಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.