ಮಡಿಕೇರಿ, ಮೇ 4: ಹಿರಿಯ ಪತ್ರಕರ್ತ ಎ.ಆರ್. ಕುಟ್ಟಪ್ಪ ಅವರನ್ನು ನಗರ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದು, ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.

2011ರಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರ ಕುರಿತಾಗಿ ಪ್ರಕಟಗೊಂಡಿದ್ದ ವರದಿಗೆ ಸಂಬಂಧಿಸಿದಂತೆ ಶಾಸಕರು ಪತ್ರಿಕಾ ಸಂಪಾದಕರು ಸೇರಿದಂತೆ ಕುಟ್ಟಪ್ಪ ಅವರು ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದು ಮಡಿಕೇರಿಯಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಈ ಮೊಕದ್ದಮೆಗೆ ಈ ಹಿಂದೆ ತಡೆಯಾಜ್ಞೆ ಇತ್ತಾದರೂ ಇತ್ತೀಚೆಗೆ ತೆರವುಗೊಂಡಿತ್ತು. ಹಾಗಾಗಿ ಮತ್ತೆ ವಿಚಾರಣೆ ಆರಂಭಗೊಂಡಿತ್ತು. ಪ್ರತಿವಾದಿಗಳು ಹಾಜರಾಗಿಲ್ಲವೆಂದು ಬಂಧನ ವಾರಂಟ್ ಜಾರಿಗೊಳಿಸಲಾಗಿತ್ತು.

ಇಂದು ನಗರ ಠಾಣಾ ಪೊಲೀಸರು ಕುಟ್ಟಪ್ಪ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದರು.

ಬಳಿಕ ಅವರನ್ನು ಸಿಸಿಹೆಚ್-82 ನ್ಯಾಯಾಲಯದ ನ್ಯಾಯಾಧೀಶರೆದುರು ಹಾಜರುಪಡಿಸಿದ ವೇಳೆ ತಾ. 6ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಹಾಗೂ ಆ ದಿನ ಬಾಂಡ್ ನೀಡುವಂತೆ ಷರತ್ತು ವಿಧಿಸಿ ನ್ಯಾಯಾಧೀಶರು ಇಂದು ಕುಟ್ಟಪ್ಪ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.