ಗೋಣಿಕೊಪ್ಪ, ಏ. 28: ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯ ವತಿಯಿಂದ ವರ್ಷಂಪ್ರತಿ ನಡೆದುಕೊಂಡು ಬರುತ್ತಿರುವ 3ನೇ ವರ್ಷದ ಕ್ರೀಡಾಕೂಟ ಮೇ 11 ರಿಂದ ಎರಡು ದಿನಗಳವರೆಗೆ ಹಾತೂರಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪುರುಷರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, 15 ವರ್ಷದ ಒಳಗಿನ ಮಕ್ಕಳಿಗೆ ಇದೇ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದೆ. ಕಳೆದ ಬಾರಿ ಸುಮಾರು 30ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದು, ಈ ವರ್ಷ ಇನ್ನೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ತಂಡಗಳು ನೋಂದಣಿ ಮಾಡಿಕೊಳ್ಳಲು ಮೇ 7ನೇ ತಾರೀಖನ್ನು ನಿಗದಿಪಡಿಸಲಾಗಿದೆ. ತಂಡಗಳು 9480294060 (ಸುದೀಪ್), 8861411875 (ಪ್ರಮೋದ್) ಸಂಖ್ಯೆಗಳನ್ನು ಸಂಪರ್ಕಿಸಿ ತಂಡದ ನೋಂದಣಿ ಮಾಡಿಸಿಕೊಳ್ಳಬೇಕಿದೆ.

ಈ ಕುರಿತಾಗಿ ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಎನ್. ಮಹೇಶ್, ಉಪಾಧ್ಯಕ್ಷ ಮಂಜುನಾಥ್ ಹಾಗೂ ಕಾರ್ಯದರ್ಶಿ ಲೋಹಿತ್ ಗೌಡ ಸೇರಿದಂತೆ ನಿರ್ದೇಶಕರುಗಳು ತಿಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರಿಕೆಟ್ ಆಟಗಾರರು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕಿದೆ. ವೀರಾಜಪೇಟೆ ತಾಲೂಕಿನ ಆಟಗಾರರು ವೇದಿಕೆಯ ಸದಸ್ಯತ್ವದೊಂದಿಗೆ ಕಾರ್ಡ್ ಪಡೆದು (45 ವಯೋಮಿತಿ ಒಳಗಿನವರು) ಕ್ರೀಡಾಕೂಟದಲ್ಲಿ ಭಾಗಿಯಾಗಬೇಕು ಹಾಗೂ ವೀರಾಜಪೇಟೆ ತಾಲೂಕಿನ ಆಟಗಾರರು ಇತರ ತಾಲೂಕಿನ ತಂಡದವರೊಂದಿಗೆ ಭಾಗಿಯಾಗದೆ ತಾಲೂಕಿನ ಒಳಗೆ ತಂಡವನ್ನು ರಚಿಸಿ ಆಡಬೇಕಿದೆ. ಕೊಡಗು ಜಿಲ್ಲೆಯಾದ್ಯಂತ ಇರುವ ಒಕ್ಕಲಿಗ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಸ್ಫ್ಪೂರ್ತಿ ಹಾಗೂ ಜನಾಂಗದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.