ಮಡಿಕೇರಿ, ಏ. 28: ಮೈಸೂರು-ಮಡಿಕೇರಿ ಹೈಸ್ಪೀಡ್ ಎಕ್ಸ್‍ಪ್ರೆಸ್ ಹೈವೇ ಯೋಜನೆಗಾಗಿ ಭೂಮಿ ಸ್ವಾಧೀನ ಕುರಿತು ಪೂರಕ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ.
ಕೇಂದ್ರ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಕೈಗೆತ್ತಿಕೊಂಡಿರುವ ಮೈಸೂರು-ಮಡಿಕೇರಿ ಎಕ್ಸ್‍ಪ್ರೆಸ್ ಹೆದ್ದಾರಿ-275 ಯೋಜನೆಗಾಗಿ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಚಾಮರಾಜಪುರಂನ ಗೀತಾ ರಸ್ತೆಯಲ್ಲಿ ವಿಶೇಷ ಭೂಸ್ವಾಧೀನಾ ಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಕಚೇರಿಯನ್ನು ತೆರೆಯಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಪ್ರಸ್ತುತ ಇರುವ ಮೈಸೂರು-ಬಂಟ್ವಾಳ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವದರಿಂದ ಹಾಗೂ ಅಲ್ಲಲ್ಲಿ ಬರುವ ತಾಲೂಕು, ಹೋಬಳಿ ಕೇಂದ್ರಗಳ ಮೇಲೆ ಹಾದುಹೋಗುವ ದರಿಂದ ಇನ್ನಷ್ಟು ವಾಹನ ದಟ್ಟಣೆಯಿಂದಾಗಿ ಮಡಿಕೇರಿ-ಮೈಸೂರು ನಡುವಿನ ಸಂಚಾರ ಸಮಯ ಹೆಚ್ಚಾಗಿದೆ. ಮಡಿಕೇರಿ-ಬೆಂಗಳೂರು ನಡುವೆ ಸಂಚರಿಸು ವವರು ಮೈಸೂರಿನ ಬರದೇ, ನೇರವಾಗಿ ಹೋಗಲು ಅನುವಾಗು ವಂತೆ ಈ ಹೊಸ ಹೆದ್ದಾರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 116 ಕಿ.ಮೀ. ಉದ್ದ ಹಾಗೂ 14 ಮೀಟರ್ ಅಗಲದ 4 ಪಥದ ಈ ಹೆದ್ದಾರಿಯು ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿ ಮತ್ತು ನಗುವನ ಹಳ್ಳಿ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ತಿರುವು ಪಡೆದು ಹುಣಸೂರು ಸಮೀಪ ಗೋಣಿಕೊಪ್ಪ ಲುವಿಗೆ ಹೋಗುವ ಡೀವಿಯೇಷನ್ ಬಳಿ ಕೂಡುತ್ತದೆ. ಮುಂದೆ ಕಳ್ಳಬೆಟ್ಟ, ಕಂಪಲಾಪುರ, ಬೈಲಕುಪ್ಪೆ, ಕೊಪ್ಪ, ಕುಶಾಲನಗರ, ಸುಂಟಿಕೊಪ್ಪ ಮೂಲಕ ಮಡಿಕೇರಿ ಸಂಪರ್ಕಿಸುತ್ತದೆ. ಮಧ್ಯೆ ಬರುವ ಪಟ್ಟಣಗಳು, ಹೋಬಳಿ ಕೇಂದ್ರಗಳ ಹೊರ ಭಾಗದಲ್ಲಿ ಬೈಪಾಸ್ ರಸ್ತೆಯಾಗುವದರಿಂದ ಯಾವದೇ ಅಡೆ-ತಡೆಯಿಲ್ಲದೆ ವಾಹನಗಳು ಅದೇ ವೇಗದಲ್ಲಿ ಚಲಿಸಬಹುದಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಈ ಯೋಜನೆಗೆ ಸುಮಾರು 516 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಸರಕಾರಿ ಜಮೀನು ಹಾಗೂ ಬಳಸಿಕೊಳ್ಳಬಹುದಾದ ಪ್ರಸ್ತುತ ಹೆದ್ದಾರಿಯನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ರೂ. 6000 ಕೋಟಿಗಳ ಪರಿಹಾರ ಕೊಡಬೇಕಾಗಬಹುದೆಂದು ಅಂದಾಜಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿಯನ್ನು 10 ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುತ್ತಿರು ವದರಿಂದ ಕಣ್ಣೂರು, ಮಡಿಕೇರಿ, ಸುಳ್ಯ, ಹೊಸ ನರಸೀಪುರ ಕಡೆಯಿಂದ ಬೆಂಗಳೂರಿಗೆ ಹೋಗುವವರಿಗೆ ಈ ಹೊಸ ಹೆದ್ದಾರಿಯು ಅನುಕೂಲ ವಾಗಲಿದೆ. ವಿಶೇಷ ಭೂಸ್ವಾಧೀನಾ ಧಿಕಾರಿ ಎ. ದೇವರಾಜು, ಯೋಜನಾ ನಿರ್ದೇಶಕ ಬಿ.ಟಿ. ಶ್ರೀಧರ್, ವ್ಯವಸ್ಥಾಪಕ ಎನ್. ವೆಂಕಟಾಚಲಪ್ಪ, ಆಯಾ ತಾಲೂಕಿನ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಹೆದ್ದಾರಿ ಲೇನ್ ಅಲೈನ್‍ಮೆಂಟ್ ಸಿದ್ಧಪಡಿಸಿ, ಸರಕಾರದಿಂದ ಅನುಮೋದನೆ ಪಡೆದು ನಂತರ ರಸ್ತೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಮತ್ತು ಸಮಗ್ರ ಯೋಜನಾ ವರದಿ ತಯಾರಿಸಿ ಹಣಕಾಸು ಮತ್ತು ತಾಂತ್ರಿಕ ಅನುಮೋದನೆ ಪಡೆದು ಯೋಜನೆಗೆ ಟೆಂಡರ್ ಕರೆಯ ಬೇಕಾಗುತ್ತದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.