ಮಡಿಕೇರಿ, ಏ. 28: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದ ಪೂರ್ವಭಾಗ ಮತ್ತು ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿನ ಪರಿಸ್ಥಿತಿಯಿಂದಾಗಿ ದಕ್ಷಿಣ ಒಳನಾಡಿನಲ್ಲಿ ಭಾರೀ ಗಾಳಿ-ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಭಾರತೀಯ ಹವಮಾನ ಇಲಾಖೆಯ ಮೂಲಕ ಏ. 27ರ ಸಂಜೆಯಿಂದಲೇ ಮಳೆಯ ಸಂಭವವಿರುವದನ್ನು ತಿಳಿಸಲಾಗಿದೆ. ಇದರಂತೆ ಕೊಡಗು ಜಿಲ್ಲೆಯಲ್ಲಿಯೂ ವಾತಾವಣರದಲ್ಲಿ ಬದಲಾವಣೆಯಾಗುವ ನಿರೀಕ್ಷೆಯಿರುವ ಕುರಿತು ಹವಾಮಾನ ಇಲಾಖೆಯ ಬೆಂಗಳೂರಿನ ನಿರ್ದೇಶಕರಾದ ಎಸ್.ಎಸ್. ಪಾಟೀಲ್ ಅವರು ‘ಶಕ್ತಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾ. 29 ರಂದು (ಇಂದು) ಹಾಗೂ ತಾ. 30 ರಂದು ಭಾರೀ ಗಾಳಿ ಸಹಿತ ಸಿಡಿಲು-ಮಳೆಯಾಗುವ ಮುನ್ಸೂಚನೆ ಇರುವದಾಗಿ ಅವರು ಹೇಳಿದ್ದಾರೆ. ಸುಮಾರು 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವದಾಗಿಯೂ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ ಮನವಿ: ಹವಾಮಾನ ಇಲಾಖೆಯ ಮಾಹಿತಿಯಂತೆ ಕೊಡಗು ಜಿಲ್ಲೆಯಲ್ಲಿಯೂ ಹೆಚ್ಚಿನ ಮಳೆಯಾಗುವ ಸಂಭವ ಇರುವದರಿಂದ ಜಿಲ್ಲಾಡಳಿತದಿಂದಲೂ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಜನತೆ ಸುರಕ್ಷಿತ ಸ್ಥಳಗಳಲ್ಲಿ ಇರಲು ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಪ್ರಕಟಣೆಯ ಮೂಲಕ ಮನವಿ ಮಾಡಿದೆ.