ಗೋಣಿಕೊಪ್ಪ ವರದಿ, ಏ. 29 : ಅಮ್ಮ ಕೊಡವ ಜನಾಂಗಗಳ ನಡುವೆ ನಡೆಯುವ ಬಾನಂಡ ಕ್ರಿಕೆಟ್ ಕಪ್ ಟೂರ್ನಿ ಮೇ 4 ರಿಂದ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ ಎಂದು ಅಖಿಲ ಅಮ್ಮಕೊಡವ ಸಮಾಜ ಗೌರವ ಅಧ್ಯಕ್ಷ ಬಾನಂಡ ಪ್ರಥ್ಯು ತಿಳಿಸಿದ್ದಾರೆ. ಅಖಿಲ ಅಮ್ಮಕೊಡವ ಸಮಾಜ ಹಾಗೂ ಬಾನಂಡ ಕುಟುಂಬ ಸಹಯೋಗದಲ್ಲಿ 5 ನೇ ವರ್ಷದ ಈ ಕ್ರೀಡಾಕೂಟ ಮೇ 6 ರವರೆಗೆ ನಡೆಯಲಿದ್ದು, 23 ತಂಡಗಳು ಸೆಣೆಸಾಟ ನಡೆಸಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ 4 ರಂದು ಬೆಳಗ್ಗೆ 9 ಗಂಟೆಗೆ ಮಾಯಮುಡಿ ರಾಮ ಮಂದಿರದಿಂದ ಮೆರವಣಿಗೆ ಮೂಲಕ ಮೈದಾನಕ್ಕೆ ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವದು. 10 ಗಂಟೆಗೆ ಕ್ರೀಡಾಕೂಟವನ್ನು ಉದ್ಘಾಟಿಸಲಾಗುವದು. ರಾಮಚಂದ್ರ ಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಶಾಸಕ ಕೆ.ಜಿ. ಬೋಪಯ್ಯ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪನ್ನೇಕರ್, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು ತಿಳಿಸಿದರು. ಕ್ರೀಡಾಕೂಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೂಡ ನಡೆಸಲಾಗುತ್ತಿದೆ ಎಂದರು.

ಮೇ 6 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಸಲಾಗುವದು ಎಂದರು. ಗೋಷ್ಠಿಯಲ್ಲಿ ಅಖಿಲ ಅಮ್ಮಕೊಡವ ಸಮಾಜ ಕಾರ್ಯದರ್ಶಿ ಪುತ್ತಮನೆ ಅನಿಲ್, ನಿರ್ದೇಶಕ ಅಮ್ಮತ್ತೀರ ರಾಜೇಶ್, ಬಾನಂಡ ಕುಟುಂಬ ಸಮಿತಿ ಕಾರ್ಯದರ್ಶಿ ಪ್ರಕಾಶ್, ಖಜಾಂಜಿ ಬಾನಂಡ ಸುದನ್ ಉಪಸ್ಥಿತರಿದ್ದರು.