ಸೋಮವಾರಪೇಟೆÉ,ಏ.29: ಸಮೀಪದ ತಣ್ಣೀರುಹಳ್ಳ ಗ್ರಾಮದ ಬಸವೇಶ್ವರ ಯುವಕ ಸಂಘದ ವತಿಯಿಂದ 46ನೇ ವಾರ್ಷಿಕೊತ್ಸವದ ಅಂಗವಾಗಿ ತಣ್ಣೀರುಹಳ್ಳ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ 2ನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟದಲ್ಲಿ ಅಮೋಘ ಆಟ ಪ್ರದರ್ಶಿಸಿದ ಅಬ್ಬೂರುಕಟ್ಟೆ ಒಕ್ಕಲಿಗರ ಸಂಘ ಪ್ರಥಮ ಸ್ಥಾನ ಪಡೆಯಿತು.
ನಿನ್ನೆ ರಾತ್ರಿಯಿಂದ ಬೆಳಗ್ಗೆಯವರೆಗೂ ನಡೆದ ಕಬಡ್ಡಿ ಪಂದ್ಯಾಟದಲ್ಲಿ ನೂರಾರು ಮಂದಿ ಕಬಡ್ಡಿ ಅಭಿಮಾನಿಗಳು ಉಪಸ್ಥಿತರಿದ್ದು ಆಟಗಾರರಿಗೆ ಪ್ರೋತ್ಸಾಹ ನೀಡಿದರು. ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಅಬ್ಬೂರುಕಟ್ಟೆ ಒಕ್ಕಲಿಗರ ತಂಡವು ಸೋಮವಾರಪೇಟೆ ಜಯ ಕರ್ನಾಟಕ ತಂಡದ ವಿರುದ್ಧ ಜಯಗಳಿಸಿ ರೂ. 30 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಜಯ ಕರ್ನಾಟಕ ತಂಡ ರೂ. 20 ಸಾವಿರ ನಗದು ಪಡೆಯಿತು. ಅಬ್ಬೂರುಕಟ್ಟೆಯ ಒಕ್ಕಲಿಗರ ಸಂಘ-2 ತೃತೀಯ, ಕುಶಾಲನಗರ ಫ್ರೆಂಡ್ಸ್ ತಂಡ 4ನೇ ಸ್ಥಾನವಾಗಿ ಕ್ರಮವಾಗಿ 10 ಮತ್ತು 5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು. ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ಕೂತಿ ಗ್ರಾಮದ ರತನ್ ಪಡೆದರು.
ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಕಬಡ್ಡಿ ಅಪ್ಪಟ ಗ್ರಾಮೀಣ ಕ್ರೀಡೆಯಾಗಿದ್ದು, ಸ್ಥಳೀಯ ಕ್ರೀಡಾಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ. ಸುಭದ್ರ ದೇಶ ಕಟ್ಟುವಲ್ಲಿ ಮಾನವ ಸಂಪನ್ಮೂಲ ಮುಖ್ಯವಾಗಿದ್ದು, ಯುವಕರ ಶಕ್ತಿ ದೇಶ ಕಟ್ಟಲು ಬಳಕೆಯಾಗಬೇಕು ಎಂದರು.
ವೇದಿಕೆಯಲ್ಲಿ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಟಿ.ಕೆ ಕಿಶೋರ್, ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ತಾಪಂ ಸದಸ್ಯೆ ತಂಗಮ್ಮ, ಪ್ರಮುಖರಾದ ಅರುಣ್ ಕಾಳಪ್ಪ, ಗಿರೀಶ್ ಮಲ್ಲಪ್ಪ, ಪವನ್ ದೇವಯ್ಯ, ತಿಮ್ಮಯ್ಯ, ಪಿ.ಡಿ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯ ಕೆ. ರವಿ, ಅಂಗನವಾಡಿ ಕಾರ್ಯಕರ್ತೆ ಕುಸುಮಾವತಿ, ಅಂಗನವಾಡಿ ಸಹಾಯಕಿ ಗ್ರೇಸಿ, ನಾಟಿ ವೈದ್ಯರಾದ ಕಮಲ ಅವರುಗಳನ್ನು ಸನ್ಮಾನಿಸಲಾಯಿತು.