ಮಡಿಕೇರಿ, ಏ. 29: ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಸಂಬಂಧ ಮನೆ-ಮಠಗಳನ್ನು ಕಳೆದಿಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಮತ್ತು ಕೃಷಿ ಫಸಲು ನಷ್ಟ ಪರಿಹಾರ ನೀಡುವಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯದೊಂದಿಗೆ ಪರಿಹಾರ ಹಣ ನೀಡುವಲ್ಲಿ ತಾರತಮ್ಯ ಎಸಗಿರುವ ಗಂಭೀರ ಆರೋಪ ಕೇಳಿಬರತೊಡಗಿದೆ. ಸರಕಾರದ ಮಾರ್ಗಸೂಚಿಯಂತೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದ ಅನೇಕರಿಗೆ ಕೇವಲ ರೂ. 3,800 ಹಣ ಲಭಿಸಿದ್ದು, ಇದುವರೆಗೆ ಮತ್ತೆ ಏನೂ ಲಭಿಸಿಲ್ಲವೆಂಬ ಆರೋಪವಿದೆ.
ಇನ್ನೊಂದೆಡೆ ಕೆಲವರಿಗೆ ಸಣ್ಣಪುಟ್ಟ ಹಾನಿಗೂ ರೂ. 5 ಸಾವಿರದಿಂದ 80 ಸಾವಿರ ಮೊತ್ತದ ಹಣವನ್ನು ಕಂದಾಯ ಇಲಾಖೆಯಿಂದ ಖುಷಿ ಬಂದಂತೆ ವಿತರಿಸಿರುವ ಟೀಕೆ ವ್ಯಕ್ತಗೊಂಡಿದೆ. ಬದಲಾಗಿ ಅನೇಕ ಮಂದಿ ಫಲಾನುಭವಿಗಳಿಗೆ ಇದುವರೆಗೆ ಏನೊಂದೂ ಸರಕಾರದ ಪರಿಹಾರ ಲಭಿಸಿಲ್ಲ ಎಂಬ ಅಸಮಾಧಾನವಿದೆ. ಕಂದಾಯ ಇಲಾಖೆಯಿಂದ ತಮಗೆ ಪರಿಚಿತರು, ಸಂಬಂಧಿಗಳಿಗೆ ಇಂತಹ ಅಧಿಕ ಮೊತ್ತದ ಪರಿಹಾರ ನೀಡಿ, ಬಡ ಕುಟುಂಬಗಳಿಗೆ ವಂಚಿಸಿರುವ ಗೊಂದಲವಿದೆ.
ಸಂಶಯಕ್ಕೆ ಕಾರಣ: ಇಲ್ಲಿ ಮನೆಗಳ ವ್ಯವಸ್ಥೆ ಗೊಂದಲಕ್ಕೆ ಹಾದಿ ಕಲ್ಪಿಸಿದರೆ, ಕೃಷಿ ಭೂಮಿ, ಗದ್ದೆ, ಕಾಫಿ ತೋಟ ಇತ್ಯಾದಿ ಕಳೆದುಕೊಂಡವರಿಗೆ ಬಹುತೇಕ ಪರಿಹಾರ ಲಭಿಸಿಲ್ಲ. ಸರಕಾರದಿಂದ ವಿವಿಧ ಬ್ಯಾಂಕ್ ಚೆಕ್‍ಗಳನ್ನು ಕಂದಾಯ ಸಿಬ್ಬಂದಿ ತಮಗೆ ತೋಚಿದವರ ಹೆಸರಿಗೆ ಬರೆದಿರುವ ಆರೋಪವಿದೆ. ಹೀಗೆ ಹಣ ಪಡೆದವರು ಮತ್ತು ಹಣ ಲಭಿಸದವರ ನಡುವೆ ಗ್ರಾಮ ಗ್ರಾಮಗಳಲ್ಲಿ ಅಂತಃಕಲಹಕ್ಕೆ ಎಡೆಮಾಡಿಕೊಟ್ಟಂತಾಗಿದೆ.
ಎಕರೆಗಟ್ಟಲೇ ಫಸಲು ಕಳೆದುಕೊಂಡವರಿಗೆ ಅಲ್ಪ ಮೊತ್ತದ ಪರಿಹಾರ, ಆಸ್ತಿಯೇ ಇಲ್ಲದವರಿಗೂ ನೆರವು, ಎಕರೆಗಟ್ಟಲೆ ಭೂಮಿಯೊಂದಿಗೆ ಮನೆ, ತೋಟ ಕಳೆದುಕೊಂಡವರಿಗೆ ಚೆಕ್ ನೀಡಿ ಹಿಂಪಡೆದಿರುವ ಆರೋಪ... ಹೀಗೆ ಹಲವು ಗೊಂದಲಗಳ ನಡುವೆ ಪ್ರಾಕೃತಿಕ ಹಾನಿ ಸಂಬಂಧ ಎಲ್ಲಿಯೋ ದುರುಪಯೋಗದ ಆರೋಪ ಕೇಳಿಬರತೊಡಗಿದೆ. ಜಿಲ್ಲಾಡಳಿತ ತಯಾರಿಸಿರುವ ಸಂತ್ರಸ್ತರ ಪಟ್ಟಿಯಲ್ಲಿ ಕೆಲವೆಡೆ ಒಂದೇ ಕುಟುಂಬದ ಅನೇಕರಿಗೆ ಪರಿಹಾರ ಲಭಿಸುವಂತಾದರೆ, ಇನ್ನು ಕೆಲವರ ಅರ್ಜಿಗಳ ಬಗ್ಗೆ ವಿಚಾರಿಸಿದರೆ ಹಾರಿಕೆ ಉತ್ತರ ನೀಡಿ ನುಣುಚಿಕೊಳ್ಳುತ್ತಿರುವ ಅಸಮಾಧಾನವಿದೆ. ಈ ಎಲ್ಲವನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಶೀಲಿಸಿ, ಕಂದಾಯ ಸಿಬ್ಬಂದಿಯ ಲೋಪ ಅಥವಾ ತಾರತಮ್ಯದ ಕುರಿತು ಅಗತ್ಯ ಕ್ರಮ ವಹಿಸಿ ನೈಜ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಬೇಕಿದೆ.
ಮನೆಗಳ ಗೊಂದಲ : ಈಗಾಗಲೇ ಜಿಲ್ಲಾಡಳಿತ ನೀಡಿರುವ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 840 ಮನೆಗಳು ಸಂಪೂರ್ಣ ಹಾನಿಗೊಂಡು ಅಂತಹ ಕುಟುಂಬಗಳಿಗೆ ಪುನರ್ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುವದಾಗಿ ಘೋಷಿಸಲಾಗಿದೆ. ಈ ಪೈಕಿ ಕರ್ಣಂಗೇರಿ, ಜಂಬೂರು, ಬಿಳಿಗೇರಿ, ಮದೆ ವ್ಯಾಪ್ತಿಯಲ್ಲಿ ಒಟ್ಟು 78.46 ಎಕರೆ ಜಾಗ ಗುರುತಿಸಿ, 770 ಮನೆಗಳನ್ನು ನಿರ್ಮಿಸಲು ನಿವೇಶನ ವ್ಯವಸ್ಥೆ ಕೈಗೊಳ್ಳಲಾಗಿದೆ.
ಆದರೆ, ಇಲ್ಲಿ 840 ಮನೆಗಳ ಬದಲಿಗೆ 53 ಕುಟುಂಬಗಳ ಅಪೇಕ್ಷೆಯಂತೆ ಅವರವರ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ತಲಾ ರೂ. 9.85 ಲಕ್ಷ ಹಣವನ್ನು ಸಂಬಂಧಿಸಿದವರು ಹಂತ ಹಂತವಾಗಿ ಕಾಮಗಾರಿ ಪೂರೈಸುವ ಸಂದರ್ಭ ನಾಲ್ಕು ಕಂತುಗಳಲ್ಲಿ ಹಣ ಪಾವತಿಸಲಾಗುವದು ಎಂದು ಪ್ರಕಟಿಸಲಾಗಿದೆ. ಇನ್ನೊಂದೆಡೆ ಅದೇ ಮಾದಾಪುರ ಬಳಿಯ ಜಂಬೂರುವಿನಲ್ಲಿ ಇನ್ಫೋಸಿಸ್ ಸಂಸ್ಥೆಯಿಂದ ನೇರವಾಗಿ 200 ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಎಲ್ಲ ಕಾಮಗಾರಿ ವೆಚ್ಚವನ್ನು ಆ ಸಂಸ್ಥೆ ನೋಡಿಕೊಳ್ಳುತ್ತಿದೆ. ಅಂತೆಯೇ ರೋಟರಿ, ಲಯನ್ಸ್ ಸಂಸ್ಥೆಗಳನ್ನು ಒಳಗೊಂಡಂತೆ ಇತರ ಖಾಸಗಿ ವಲಯದಿಂದ ಮನೆಗಳ ನಿರ್ಮಾಣ ಕೈಗೊಳ್ಳುವ ಭರವಸೆ ಇದೆ.
ಇಲ್ಲಿ ಗೊಂದಲ: ಹೀಗಾಗಿ ಇಲ್ಲಿ ಗೊಂದಲವಿದ್ದು, 840 ಫಲಾನುಭವಿಗಳ ಪೈಕಿ ಸರಕಾರದಿಂದ ನೇರವಾಗಿ ಫಲಾನುಭವಿಗಳಿಗೆ ನಿರ್ಮಿಸುವ ಮನೆಗಳ ಹಾಗೂ ವೆಚ್ಚದ ಬಗ್ಗೆ ಗೊಂದಲ ಹುಟ್ಟಿಕೊಂಡಿದೆ. ಜಿಲ್ಲೆಯ ಮೂರು ಕಡೆಗಳಲ್ಲಿ ಇದುವರೆಗೆ ಕೇವಲ 60 ರಿಂದ 80 ಮನೆಗಳ ಕೆಲಸ ಮಾತ್ರ ಶೇ. 60 ರಷ್ಟು ಸಾಗಿದ್ದು, ಇನ್ನೊಂದು ತಿಂಗಳಿನಲ್ಲಿ ಮಿಕ್ಕೆಲ್ಲ ಮನೆಗಳ ನಿರ್ಮಾಣ ಹೇಗೆ ಸಾಧ್ಯ ಅಥವಾ ಪೂರ್ಣಗೊಂಡೀತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಈ ಮನೆಗಳನ್ನು ಯಾವ ಫಲಾನುಭವಿಗಳು ಹೊಂದಿಕೊಳ್ಳಲಿದ್ದಾರೆ ಹಾಗೂ ಪ್ರಸಕ್ತ ನಿರ್ಮಿಸುತ್ತಿರುವ ಮನೆಗಳನ್ನು ಅವರು ಒಪ್ಪಿಕೊಂಡಿದ್ದಾರೆಯೇ ಎಂಬ ಶಂಕೆ ವ್ಯಕ್ತಗೊಳ್ಳತೊಡಗಿದೆ. ಕಾರಣ 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರು ಮದೆ ಗ್ರಾ.ಪಂ. ವ್ಯಾಪ್ತಿಯಿಂದ ಬೇರೆಡೆಗೆ ತೆರಳುವದಿಲ್ಲವೆಂದು ಈಗಾಗಲೇ ಘೋಷಿಸಿದ್ದಾರೆ.
ಕಾಲೂರು ಸುತ್ತ ಮುತ್ತಲಿನ ಮಂದಿ ಸರಕಾರದ ಹಣದಿಂದ ತಾವೇ ಸ್ವಂತ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುವದಾಗಿ ಹೇಳುತ್ತಿದ್ದಾರೆ. ಇನ್ನು ಮಕ್ಕಂದೂರು, ಹೆಮ್ಮೆತ್ತಾಳು, ಉದಯಗಿರಿ ವ್ಯಾಪ್ತಿಯ ಮಂದಿ ಕರ್ಣಂಗೇರಿಯ ಕೇವಲ 39 ಮನೆಗಳಿಗೆ ತೆರಳಿ ವಾಸಿಸುವದು ಅಸಾಧ್ಯ. ಇವರುಗಳು ದೂರದ ಜಂಬೂರು ಇತರೆಡೆ ಹೋಗಲು ಒಪ್ಪುತ್ತಿಲ್ಲ.
ಹೀಗಾಗಿ ಭವಿಷ್ಯದಲ್ಲಿ ಕಳೆದ ಮಳೆಗಾಲದ ಸಂತ್ರಸ್ತ ಕುಟುಂಬಗಳು ನಿಖರವಾಗಿ ಎಲ್ಲಿ ನೆಲೆ ಕಂಡುಕೊಳ್ಳುತ್ತಾರೆ ಎಂಬ ಗೊಂದಲ ಹುಟ್ಟಿಕೊಂಡಿದೆ. ಅಲ್ಲದೆ ಪುನರ್ ವಸತಿ ಮನೆಗಳು ಸಾಮೂಹಿಕವಾಗಿ ರೂಪುಗೊಂಡಿರುವ ಯೋಜನೆಯಾಗಿದೆ. ಇಂತಹ ಮನೆಗಳಿಗೆ ಸ್ವಂತ ಜಾಗದಲ್ಲಿ ಭೂಕುಸಿತದ ಹಾನಿ ನಡುವೆ ಬಿಟ್ಟು ಹೋಗುವವರು ಯಾರು? ಎಂಬ ಪ್ರಶ್ನೆ ಉದ್ಭವಿಸಲಿದೆ.
ಸಚಿವರ ಹೇಳಿಕೆ ನೆನಪಿರಬೇಕು: ಈ ಹಿಂದೆ ಪುನರ್ವಸತಿ ಯೋಜನೆ ರೂಪಿಸುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಜಿಲ್ಲಾ ಆಡಳಿತ ಪ್ರಮುಖರ ಸಭೆಯಲ್ಲಿ ಹೇಳಿರುವ ಮಾತು ಇಲ್ಲಿ ನೆನಪಿಸಿಕೊಳ್ಳ ಬೇಕಿದೆ. ಆ ಪ್ರಕಾರ ಪುನರ್ವಸತಿ ಯೋಜನೆಯ ಮನೆ ಹೊಂದಿಕೊಳ್ಳು ವವರು ತಾವು ಹಾಲೀ ವಾಸವಿರುವ ಮನೆ ಜಾಗವನ್ನು ಸರಕಾರಕ್ಕೆ (ಸಂಬಂಧಿಸಿದ ಇಲಾಖೆಗೆ) ಬಿಟ್ಟುಕೊಡಬೇಕೆಂದು ಸ್ಪಷ್ಟವಾಗಿ ಹೇಳಿದ್ದರು.
ಈ ಹೇಳಿಕೆಯನ್ನು ಪಾಲಿಸುವಂತಾದರೆ, ಈಗಾಗಲೇ 840 ಮನೆಗಳನ್ನು ಕಳೆದುಕೊಂಡಿರುವ ಬಹುತೇಕ ನಿರಾಶ್ರಿತರು ಜಾಗ ಬಿಟ್ಟು ಹೋಗಲು ಒಪ್ಪಿಕೊಂಡಿಲ್ಲ. ಆ ಮಾತ್ರದಿಂದ ಈಗ ಕಟ್ಟುತ್ತಿರುವ ಸಾಮೂಹಿಕ ಮನೆಗಳಿಗೆ ಭವಿಷ್ಯದಲ್ಲಿ ತೆರಳುವವರಾರು ? ಎಂಬ ಪ್ರಶ್ನೆ ಒಂದೆಡೆಯಾದರೆ, ನೈಜ ಸಂತ್ರಸ್ತರ ಮುಂದಿನ ಪಾಡೇನು ? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.
ದೆ.