ಮಡಿಕೇರಿ, ಏ. 28: ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದಿನಿಂದ ಕಣ್ಮರೆಯಾದಂತಿದ್ದ ಕಾಡಾನೆಗಳು ಇದೀಗ ಮತ್ತೆ ನಾಡಿನೊಳಗೆ ಪ್ರತ್ಯಕ್ಷಗೊಳ್ಳುತ್ತಿರುವದು ಕಂಡು ಬರುತ್ತಿದೆ. ಹಲವಾರು ಕಡೆಗಳಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು, ರೈತರ ಕೃಷಿ ಫಸಲುಗಳು ಆನೆಗಳಿಗೆ ಆಹಾರವಾಗುತ್ತಿವೆ. ಕಳೆದ ಮಳೆಗಾಲದ ಬಳಿಕ ಬಹುತೇಕ ಕಡೆಗಳಲ್ಲಿ ಆನೆಗಳು ಗೋಚರಿಸಿರಲಿಲ್ಲ. ಇದೀಗ ದಿಢೀರನೆ ಪ್ರತ್ಯಕ್ಷವಾಗುತ್ತಿರು ವದರ ಹಿಂದೆ ಹಲವು ವಿಚಾರಗಳು ಅಡಗಿರುವದಾಗಿ ವಿಶ್ಲೇಷಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಾಡಾನೆಗಳ ಸಂತತಿಯೂ ಅಧಿಕಗೊಂಡಿದ್ದು, ಗುಂಪು ಗುಂಪಾಗಿ ಸಂಚರಿಸುವ ಆನೆಗಳು ಕರಿಮಂದೆಯ ರೀತಿಯಲ್ಲಿ ಗೋಚರಿಸುತ್ತಿರುವದು ಆತಂಕಕಾರಿಯಾಗಿದೆ.ಒಂದೆಡೆ ಬೇಸಿಗೆಯ ಪರ್ವಕಾಲವಾಗಿದ್ದು, ಆನೆಗಳಿಗೆ ಅರಣ್ಯದಲ್ಲಿ ಆಹಾರ - ನೀರಿನ ಕೊರತೆ ಇದ್ದು, ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ನೆರಳನ್ನು, ನೀರನ್ನು ಅರಸಿಕೊಂಡು ಆನೆಗಳು ತಿರುಗಾಡು ತ್ತಿವೆ. ಅರಣ್ಯ ಪ್ರದೇಶಗಳಲ್ಲಿ ಪ್ರಸ್ತುತ ಬಿದಿರು, ಇನ್ನಿತರ ಆಹಾರ ಪದಾರ್ಥ ಗಳು ಸಿಗುತ್ತಿಲ್ಲ ಅಲ್ಲದೆ ಅಲ್ಲಲ್ಲಿ ಬೆಂಕಿ ಬೀಳುತ್ತಿರುವದ ರಿಂದಲೂ ಆನೆಗಳಿಗೆ ಕಾಡಿಗಿಂತ ನಾಡಿನಲ್ಲೇ ರಕ್ಷಣೆ ಅಧಿಕ ಎಂಬಂತಾಗಿವೆ ಎನ್ನುತ್ತಾರೆ ಹಲವು ಅನುಭವಸ್ಥರು. ಕೊಡಗಿನಲ್ಲಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂಬ

(ಮೊದಲ ಪುಟದಿಂದ) ಆಗ್ರಹ ಹಲವಾರು ವರ್ಷಗಳಿಂದ ಹಾಗೆಯೇ ಉಳಿದು ಹೋಗಿದೆ.

ಕಾಫಿ ತೋಟಗಳಲ್ಲಿ ಇನ್ನೂ ಹಲಸಿನ ಕಾಯಿ ಹಣ್ಣಾಗುವ ಹಂತ ತಲಪಿಲ್ಲವಾದರೂ ನೀರು - ನೆರಳು - ಆಹಾರವನ್ನು ಅರಸುತ್ತಾ ಹಿಂಡು ಹಿಂಡಾಗಿ ಆನೆಗಳು ಆಗಮಿಸುತ್ತಿರುವದು ಬೆಳೆಗಾರರು, ರೈತರಲ್ಲಿ ಆತಂಕ ಸೃಷ್ಟಿಸಿದೆ. ನಾಡಿನೊಳಗೆ ಬರುವ ಆನೆಗಳಿಗೆ ಬಾಳೆ - ಅಡಿಕೆ ಇತ್ಯಾದಿ ಫಸಲುಗಳು ಆಹಾರವಾಗುತ್ತಿವೆ. ಮಾತ್ರವಲ್ಲದೆ ಜನಜೀವನದ ಮೇಲೂ ಭೀತಿಯ ವಾತಾವರಣ ಉಂಟಾಗುತ್ತಿವೆ. ಅರಣ್ಯ ಇಲಾಖೆ ತಾತ್ಕಾಲಿಕ ಪ್ರಯತ್ನ ನಡೆಸುವದು ಬಿಟ್ಟರೆ ಪ್ರಸ್ತುತ ಇವೆಲ್ಲವವನ್ನೂ ಮೀರಿ ಕಾಡಾನೆಗಳು ನಾಡಿನೊಳಗೆ ಸುಲಲಿತವಾಗಿ ಪ್ರವೇಶಿಸಲು ಮತ್ತೊಂದು ಮಾರ್ಗವನ್ನು ಕಂಡುಕೊಂಡಿವೆ ಎನ್ನಲಾಗುತ್ತಿದೆ. ಅರಣ್ಯ ವ್ಯಾಪ್ತಿಗಳಲ್ಲಿ ಕೆಲವೆಡೆ ಸೋಲಾರ್ ಬೇಲಿಯ ತಡೆಯಿದ್ದರೆ ನದಿಗಳ ವ್ಯಾಪ್ತಿಯಲ್ಲಿ ಇವು ಇಲ್ಲ. ಪ್ರಸ್ತುತ ನದಿಗಳಲ್ಲಿ ನೀರಿನ ಮಟ್ಟ ಕ್ಷೀಣಗೊಂಡಿರುವದರಿಂದ ನದಿಗಳ ಮೂಲಕ ಸಾಗಿ ಬರುವ ಆನೆಗಳು ನಾಡಿನೊಳಗೆ ಲಗ್ಗೆಯಿಡುತ್ತಿವೆ. ನದಿ ತೀರಗಳಲ್ಲಿ ಎಲ್ಲಿಯೂ ಸೋಲಾರ್ ತಂತಿ ಬೇಲಿಯ ಅಡ್ಡಿ ಆನೆಗಳಿಗೆ ಇಲ್ಲ. ಅಲ್ಲದೆ ನೀರು ಕೂಡ ಇಳಿಮುಖವಾಗಿರುವದರಿಂದ ಇದುವೇ ಆನೆಗಳಿಗೆ ‘ರಾಜಮಾರ್ಗ’ ದಂತಾಗಿವೆ ಎಂಬ ಮಾತುಗಳು ಹಲವು ಬೆಳೆಗಾರರು ಸೇರಿದಂತೆ ಅರಣ್ಯ ಇಲಾಖಾ ಸಿಬ್ಬಂದಿಗಳಿಂದಲೂ ಕೇಳಿಬರುತ್ತಿವೆ.

ಪ್ರಸ್ತುತ ನೆಲ್ಲಿಹುದಿಕೇರಿ, ಬಳಂಜಿಗೆರೆ, ಮೀನುಕೊಲ್ಲಿ, ನಲ್ವತೇಕ್ರೆ, ಸಿದ್ದಾಪುರ, ಕರಡಿಗೋಡು, ಪಾಲಿಬೆಟ್ಟ ಮತ್ತಿತರ ಕೆಲವು ಕಡೆಗಳಲ್ಲಿ ಆನೆಗಳು, ದಿನಂಪ್ರತಿ ಓಡಾಡುತ್ತಿವೆ. ಪಾಲಂಗಾಲ, ಚೆಟ್ಟಳ್ಳಿ ಮತ್ತಿತರ ಕಡೆಗಳಲ್ಲಿಯೂ ಆನೆಗಳ ಹಿಂಡು ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿವೆ. ಹಲವೆಡೆ ನೀರಿನ ತಂಪು ಅರಸಿ ಬಂದ ಆನೆಗಳು ಬೆಳೆಗಾರರ ಕೆರೆಗಳಲ್ಲಿ ಸಿಲುಕಿಕೊಂಡಂತಹ ಪ್ರಸಂಗಗಳೂ ಅಲ್ಲಲ್ಲಿ ನಡೆದಿವೆ.

‘ಶಕ್ತಿ’ಗೆ ತಿಳಿದು ಬಂದಂತೆ ಮರಿಗಳ ಸಹಿತಾಗಿ ಸುಮಾರು 21 ಆನೆಗಳಿರುವ ಒಂದು ಹಿಂಡು, 12 ಆನೆಗಳ ಮತ್ತೊಂದು ಹಿಂಡು ಹಾಗೂ 6 ಆನೆಗಳ ಮಗದೊಂದು ಹಿಂಡು ಅಲ್ಲಲ್ಲಿ ನಾಡಿನೊಳಗೆ ಲಗ್ಗೆ ಹಾಕುತ್ತಿರುವದು, ದಾಳಿ ನಡೆಸುತ್ತಿರುವ ಬಗ್ಗೆ ವರದಿಯಾಗುತ್ತಿವೆ.

ಚುನಾವಣೆಗೂ ತಟ್ಟಿದ್ದ ಬಿಸಿ

ಪ್ರಸಕ್ತ ಜರುಗಿದ ಲೋಕಸಭಾ ಚುನಾವಣೆಯ ಮೇಲೂ ಕಾಡಾನೆಗಳ ವಿಚಾರ ಗಂಭೀರ ಪರಿಣಾಮ ಬೀರಿರುವದನ್ನು ಸರಕಾರಗಳು, ಸಂಬಂಧಿಸಿದ ಇಲಾಖೆ ಅರಿಯಬೇಕಿದೆ. ಮತದಾರರು ಮತಗಟ್ಟೆಗಳಿಗೆ ತೆರಳಲು ಕಾಡಾನೆಗಳಿಂದ ಅಡಚಣೆಯಾಗಬಹುದೆಂದು ವಿಶೇಷ ಕಾರ್ಯಪಡೆಯನ್ನು ಶಸ್ತ್ರಸಜ್ಜಿತವಾಗಿ ಅಲ್ಲಲ್ಲಿ ಕರ್ತವ್ಯ ನಿಯೋಜಿಸಿದ್ದ ಸನ್ನಿವೇಶವನ್ನು ಬಹುಶಃ ಇನ್ನೆಲ್ಲಿಯೂ ಕಾಣಲಾಗದು. ಚುನಾವಣಾ ದಿನದಂದು ತೋರಲಾಗಿದ್ದ ಈ ಆಸಕ್ತಿಯನ್ನು ಮುಂದಿನ ದಿನಗಳಲ್ಲಿ ಮಕ್ಕಳು, ಶಾಲಾ - ಕಾಲೇಜಿಗೆ ತೆರಳುವ ವಿಚಾರದಲ್ಲೂ ಅನುಸರಿಸಬೇಕಾಗಿದೆ ಎಂಬದು ಹಲವರ ಅಭಿಪ್ರಾಯ.

ಕೊಡಗಿನಲ್ಲಿ ಅದೆಷ್ಟೋ ವರ್ಷಗಳಿಂದ ಕಾಡಾನೆ ಹಾವಳಿ ಕುರಿತ ವಿಚಾರ - ಜನತೆ ಪ್ರಾಣ ಕಳೆದುಕೊಳ್ಳುತ್ತಿರುವದು, ಫಸಲು ನಾಶ ಇತ್ಯಾದಿ ವಿಚಾರಗಳು ಚರ್ಚೆಯಾಗುತ್ತಲೇ ಬಂದಿವೆ. ವಿಧಾನಸಭೆ, ವಿಧಾನಪರಿಷತ್‍ನಲ್ಲೂ ಈ ವಿಚಾರ ಬಿಸಿ ಕಂಡಿದೆ. ಕೆಲವು ತಿಂಗಳ ಹಿಂದೆ ಆನೆಚೌಕೂರು ರಸ್ತೆಯಲ್ಲಿ ಬಸ್ಸೊಂದು ಆನೆಗೆ ಡಿಕ್ಕಿಯಾಗಿ ಆನೆ ಸಾವನ್ನಪ್ಪಿದ ಪ್ರಕರಣದಿಂದ ಈ ರಸ್ತೆಯನ್ನೇ ಬಂದ್ ಮಾಡಬೇಕೆಂಬ ಬೇಡಿಕೆ ಕೇಳಿಬಂದಿರುವದನ್ನು ಇಲ್ಲಿ ಸ್ಮರಿಸಬಹುದು. ಆದರೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ರಾಜ್ಯ, ಕೇಂದ್ರ ಸರಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಸಾಕಷ್ಟು ಆರ್ಥಿಕತೆಯನ್ನು ನೀಡುವ ಕೊಡಗಿನ ಜನರು ಎದುರಿಸುತ್ತಿರುವ ಭಯಾನಕ ಪರಿಸ್ಥಿತಿಯನ್ನು ವಸ್ತು ನಿಷ್ಠವಾಗಿ ಅರಿಯಲು ಯಾರೂ ಪ್ರಾಮಾಣಿಕ ಕಾಳಜಿ ತೋರದಿರುವದು ವಿಪರ್ಯಾಸವಾಗಿದೆ.