ಮಡಿಕೇರಿ, ಏ.29: ಕೊಡಗು ಜಿಲ್ಲೆಯಲ್ಲಿ ಈ ವರ್ಷವೂ ಸಹ ಕಳೆದ ವರ್ಷದಂತೆ ಕೇರಳ ಮಾದರಿಯಲ್ಲಿ ವಿಪರೀತ ಮಳೆಯೊಂದಿಗೆ ಪ್ರಾಕೃತಿಕ ವಿಕೋಪ ಸಂಭವಿಸಲಿದೆ ಎಂದು ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ ಮಾಜಿ ಉಪ ನಿರ್ದೇಶಕ ಡಾ. ಹೆಚ್.ಎಸ್. ಪ್ರಕಾಶ್ ಎಂಬವರು ನೀಡಿರುವ ಹೇಳಿಕೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಲ್ಲಗಳೆದಿದ್ದು, ಕೊಡಗಿನ ಜನತೆ ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಸ್ಪಷ್ಟನೆ ನೀಡಿದೆ. ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ ಮಾಜಿ ಉಪ ನಿರ್ದೇಶಕ ಡಾ. ಹೆಚ್.ಎಸ್. ಪ್ರಕಾಶ್ ಹೇಳಿಕೆ ಸಂಬಂಧ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ಪತ್ರ ಬರೆದು ಜಿಲ್ಲೆಯ ಜನತೆಯ ಆತಂಕದ ಬಗ್ಗೆ ಗಮನ ಸೆಳೆದಿದ್ದರು. ಈ ಬಗ್ಗೆ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸ ರೆಡ್ಡಿ ಸ್ಪಷ್ಟೀಕರಣ ನೀಡಿದ್ದಾರೆ.
ಆ ಪ್ರಕಾರ ಪ್ರಕಾಶ್ ಅವರ ಹೇಳಿಕೆಯು ಜಿಲ್ಲೆಯ ಜನತೆಯಲ್ಲಿ ಭೀತಿ ಉಂಟುಮಾಡಿತ್ತು. ಈ ಬಗ್ಗೆ ಕೊಡಗಿನ ಅನೇಕರು ಆತಂಕದೊಂದಿಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಸಂಬಂಧಪಟ್ಟವರ ಗಮನ ಸೆಳೆದಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‍ಎನ್‍ಡಿಎಂಸಿ) ನಿರ್ದೇಶಕರು ಸ್ಪಷ್ಟೀಕರಣ ನೀಡಿದ್ದಾಗಿದೆ.
ಆ ಪ್ರಕಾರ, ಕಳೆದ ವರ್ಷ ಕೊಡಗು ಜಿಲ್ಲೆ ಮತ್ತು ಕೇರಳದಲ್ಲಿ ಅಸಹಜ ರೀತಿಯ ಭಾರೀ ಮಳೆಯಾಗಿತ್ತು. ಮಳೆ ಹಾಗೂ ಬೇರೆ ಭಾಗಗಳಲ್ಲಿ ಉಂಟಾಗುವ ಜ್ವಾಲಾಮುಖಿ ಸ್ಫೋಟಕ್ಕೂ ಸಂಬಂಧವಿರುವ ಬಗ್ಗೆ ವ್ಯವಸ್ಥಿತ ವೈಜ್ಞಾನಿಕ ಸಂಶೋಧನೆಗಳಿಂದ ಇನ್ನಷ್ಟೇ ಖಾತರಿಯಾಗ ಬೇಕಿದೆ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಕಳೆದ ವಾರ ಕೊಡಗಿನಲ್ಲಿ ಬಿದ್ದ ಮಳೆಯು ಮುಂಗಾರು ಪೂರ್ವ ಮಳೆಯಾಗಿದ್ದು, ಸಾಮಾನ್ಯವಾದ ಗುಡುಗು-ಮಿಂಚಿನಿಂದ ಕೂಡಿದ್ದು, ಯಾವದೇ ರೀತಿಯ ಜ್ವಾಲಾಮುಖಿ ಸ್ಫೋಟದ ಪರಿಣಾಮ ಉಂಟಾಗಿರುವದಿಲ್ಲ ಎಂದು ಸಮಜಾಯಿಷಿಕೆ ನೀಡಲಾಗಿದೆ.
ಕರ್ನಾಟಕ ರಾಜ್ಯದ ಯಾವದೇ ಭಾಗದಲ್ಲಿ ಈ ವರ್ಷ ಅತಿವೃಷ್ಠಿ ಹಾಗೂ ಸಂಬಂಧಿತ ಪ್ರವಾಹ ಉಂಟಾಗುವ ಬಗ್ಗೆ ಪ್ರಸ್ತುತ ಯಾವದೇ ಮುನ್ಸೂಚನೆಗಳಿರುವದಿಲ್ಲ, ಬದಲಾಗಿ ಕೇಂದ್ರದ ವತಿಯಿಂದ
(ಮೊದಲ ಪುಟದಿಂದ) ರಾಜ್ಯದ ಹವಾಮಾನದಲ್ಲಿನ ಏರಿಳಿತಗಳನ್ನು ಗ್ರಾಮ ಪಂಚಾಯತಿವಾರು ನಿರಂತರವಾಗಿ, ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಹವಾಮಾನ ಮತ್ತು ಭೌಗೋಳಿಕ ವೈಪರೀತ್ಯದಿಂದ ಉಂಟಾಗಬಹುದಾದ ಪ್ರಕೃತಿ ವಿಕೋಪದ ಬಗ್ಗೆ ಪೂರ್ವಭಾವಿಯಾಗಿ ಮುನ್ನೆಚ್ಚೆರಿಕೆ ವಹಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಮಳೆ ಸಂಬಂಧ ಯಾವದೇ ರೀತಿಯ ದೃಢೀಕರಿಸಲಾಗದ ಅಥವಾ ಅಧಿಕೃತವಲ್ಲದ ಹೇಳಿಕೆಗಳಿಂದ ಜನರು ಭೀತಿ ಪಡದೆ, ಹವಾಮಾನ ಮತ್ತು ಮಳೆ ಬಗ್ಗೆ ಅಧಿಕೃತ ಮಾಹಿತಿಗಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಾಯವಾಣಿ ಸಂಖ್ಯೆ: 080-67735999 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಅಂಶವನ್ನು ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರು ಖಚಿತಪಡಿಸಿದ್ದು, ಈಗಿನ ಸನ್ನಿವೇಶದಲ್ಲಿ ಮೇಲಾಧಿಕಾರಿಗಳ ನಿರ್ದೇಶನದಂತೆ ಕೊಡಗಿನ ಜನತೆ ಯಾವದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.