ಸೋಮವಾರಪೇಟೆ, ಏ.28: ಗ್ರಾಮೀಣ ಭಾಗದ ಜನರ ಜಾನಪದದ ಪ್ರಮುಖ ಆಚರಣೆಗಳಲ್ಲಿ ಒಂದಾದ ಸುಗ್ಗಿ ಉತ್ಸವಗಳು ಅನೇಕ ಭಾಗಗಳಲ್ಲಿ ನಡೆದಿದ್ದು, ಹಲವು ಆಕರ್ಷಣೆಗಳ ಕೇಂದ್ರಬಿಂದುವಾದ ನಗರಳ್ಳಿ ಸುಗ್ಗಿ ತಾ. 29ರಂದು (ಇಂದು) ನಡೆಯಲಿದೆ.

ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವವು ಹಲವು ಸಾಂಪ್ರದಾಯಿಕ ಆಚರಣೆಗಳಿಂದ ನಡೆಯುತ್ತಿದ್ದು, ತಾ. 29ರಂದು ನಗರಳ್ಳಿ ಗ್ರಾಮದ ಸುಗ್ಗಿ ಕಟ್ಟೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಹಗಲು ಸುಗ್ಗಿ ನಡೆಯಲಿದೆ.

ಶಾಂತಳ್ಳಿ ಹೋಬಳಿಯ ಮಲೆನಾಡ ಮಡಿಲಲ್ಲಿ ನಡೆಯುವ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವದಲ್ಲಿ ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಓಡಳ್ಳಿ ಗ್ರಾಮದ ಜನರು ಒಂದೆಡೆ ಕಲೆತು ಉತ್ಸವದಲ್ಲಿ ಭಾಗವಹಿಸುತ್ತಾರೆ.

ಸುಗ್ಗಿ ಆಚರಣೆಯ ಭಾಗವಾಗಿ ದೇವರ ತವರೂರೆಂದೇ ಕರೆಯಲ್ಪಡುವ ಕೂತಿ ಗ್ರಾಮದ ಚಾವಾಡಿಕಟ್ಟೆಯಲ್ಲಿ ಶನಿವಾರ ರಾತ್ರಿ ಸುಗ್ಗಿ ಉತ್ಸವ ನಡೆಯಿತು. ಗ್ರಾಮದ ಮನೆಗಳಿಂದ ದೀಪಗಳನ್ನು ತಂದು ಪೂಜೆ ಸಲ್ಲಿಸಿದ ನಂತರ ಸುಗ್ಗಿ ಕುಣಿತದಲ್ಲಿ ಪಾಲ್ಗೊಂಡರು. ಪ್ರಸಕ್ತ ಸಾಲಿನ ಸುಗ್ಗಿ ಉತ್ಸವದ ಕೊನೆಯ ದಿನವಾದ ಸೋಮವಾರದಂದು 18 ಗ್ರಾಮಗಳ ಜನರು ಒಂದೆಡೆ ಸೇರಿ ಗ್ರಾಮದ ಸುಭೀಕ್ಷೆಗಾಗಿ ಪ್ರಾರ್ಥನೆ ಸಲ್ಲಿಸುವದು, ದೇವರ ಒಡೆಕಾರರನ್ನು ಕಲ್ಲಿನ ಕಂಬದಲ್ಲಿ ಬಿದಿರಿನ ಉಯ್ಯಾಲೆಯಲ್ಲಿ ತೂಗುವದು, ದೇವರಿಗೆ ಹಣ್ಣುಕಾಯಿ ಸಮರ್ಪಿಸುವ ಪೂಜಾ ಕೈಂಕರ್ಯಗಳು ತಾ. 29ರಂದು ನಡೆಯಲಿವೆ.