ಕೂಡಿಗೆ, ಏ. 28: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ವಿಜಯನಗರದ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ 6ನೇ ವರ್ಷದ ದುರ್ಗಾಪರಮೇಶ್ವರಿ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಕಾವೇರಿ ನದಿಯಿಂದ ಕಲಶವನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತಂದು, ಶ್ರೀ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಹೋಮ, ದುರ್ಗಾ ಹೋಮ, ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು, ಬಸವನತ್ತೂರು, ವಿಜಯನಗರ ಸೇರಿದಂತೆ ಸುತ್ತಮುತ್ತಲ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡಿದ್ದರು. ಗ್ರಾಮವು ತಳಿರು-ತೋರಣಗಳಿಂದ, ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತ್ತು.
ವಿಜಯನಗರದ ದಿ. ಈಶ್ವರ ಅವರ ಪತ್ನಿ ಲೀಲಾ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾಲಿನಿ ಅವರು 6ನೇ ವರ್ಷದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪೂಜೆಯ ಹಾಗೂ ಎಲ್ಲಾ ಇತರ ಅಗತ್ಯ ಕೊಡುಗೆಯನ್ನು ನೀಡಿರುತ್ತಾರೆ.