ಪ್ರತಿಭಟನೆಯ ಎಚ್ಚರಿಕೆ

ಸೋಮವಾರಪೇಟೆ, ಏ. 28: ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆಯೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣರವರ ಭಾವಚಿತ್ರವನ್ನು ಅಳವಡಿಸಲು ಆದೇಶ ನೀಡಿದ್ದರೂ, ಇಂದಿಗೂ ಆದೇಶ ಜಾರಿಯಾಗಿಲ್ಲ. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಎಚ್ಚರಿಸಿದ್ದಾರೆ.

ಬಸವಣ್ಣ ಯಾವದೇ ಒಂದು ಜಾತಿ, ವರ್ಗಕ್ಕೆ ಮೀಸಲಾದವರಲ್ಲ. 12ನೇ ಶತಮಾನದಲ್ಲಿ ಜಾತೀಯತೆ, ಕಂದಾಚಾರ, ಸಮಾನತೆಗಾಗಿ ಹೋರಾಟ ನಡೆಸಿ, ಸಾಮಾಜಿಕ ಸುಧಾರಣೆಗೆ ಮುನ್ನುಡಿ ಬರೆದವರು. ಅಂತಹ ಮಹಾನುಭಾವರ ಭಾವಚಿತ್ರವನ್ನು ತಕ್ಷಣ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.

ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣರವರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸುವಂತೆ ಸರ್ಕಾರಿ ಆದೇಶ ಜಾರಿಗೊಳಿಸಿ 2 ವರ್ಷ ಕಳೆದಿದ್ದರೂ, ಇಲ್ಲಿಯವರೆಗೆ ಭಾವಚಿತ್ರವನ್ನು ಅಳವಡಿಸಿಲ್ಲ. ಸರ್ಕಾರಿ ಆದೇಶ ಜಾರಿಗೆ ತರುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಮೇ 7 ರಂದು ನಡೆಯಲಿರುವ ಬಸವ ಜಯಂತಿಯ ಒಳಗಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಅಳವಡಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ.