ಸೋಮವಾರಪೇಟೆ, ಏ. 28: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಸಮಾವೇಶ ಮೇ 5 ರಂದು ನಡೆಯಲ್ಲಿದ್ದು, ಇದರ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 5 ರಂದು ಸಂಜೆ 5 ಗಂಟೆಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ತಾಲೂಕು ಸಮಾವೇಶದೊಂದಿಗೆ ಕಲೆ, ಸಂಸ್ಕøತಿ, ಆಚಾರ, ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕವಿಗೋಷ್ಠಿ, ಸಂಗೀತ ರಸ ಮಂಜರಿ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಂಜೆ 5 ಗಂಟೆಗೆ ಕರವೇ ಸಾಹಿತ್ಯ ಬಳಗದ ಸೃಷ್ಟಿಯ ಚಿಗುರು ತಂಡದಿಂದ ಯುಗಾದಿ ಹಬ್ಬದ ಪ್ರಯುಕ್ತವಾಗಿ ವಿಶೇಷ ಕವಿಗೋಷ್ಠಿ ನಡೆಯಲಿದೆ. ನಂತರ ಸ್ಥಳೀಯ ಪ್ರತಿಭೆಗಳಿಂದ ಕೂಡಿರುವ ಅಡ್ವೇಂಚರ್ ಕಲಾ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಸ್ಥಳೀಯ ಕಲಾವಿದರ ಕೂರ್ಗ್ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ಮಾಹಿತಿಯಿತ್ತರು. 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಕೋಶಾಧಿಕಾರಿ ಎಸ್.ಎ. ಮುರಳೀಧರ್ ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕರವೇ ತಾಲೂಕು ಕಾರ್ಯದರ್ಶಿ ಎಚ್.ಎ. ಹಸನಬ್ಬ, ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್, ಸಂಚಾಲಕರುಗಳಾದ ಆದರ್ಶ್ ಹಾಗೂ ಗುರುಪ್ರಸಾದ್ ಉಪಸ್ಥಿತರಿದ್ದರು.