ಮಡಿಕೇರಿ, ಏ. 29: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಲ್ಕನೇ ದರ್ಜೆ ನೌಕರರಿಗೆ ಹುದ್ದೆ ಖಾಯಂಗೊಳಿಸದೆ, ಬರುವ ಜೂನ್‍ನಿಂದ ತೆಗೆದು ಹಾಕುವ ಹುನ್ನಾರ ನಡೆದಿದೆ ಎಂದು ಸರಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳ ಸಂಘ ಆರೋಪಿಸಿದ್ದು, ತಮ್ಮನ್ನು ಹುದ್ದೆಯಲ್ಲಿ ಮುಂದುವರೆಸಿ ಖಾಯಂಗೊಳಿಸುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸುವ ಮೂಲಕ ಮನವಿ ಪತ್ರದೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು. ಆಸ್ಪತ್ರೆ ನೌಕರರಿಗೆ ಸರಿಯಾಗಿ ವೇತನ ಪಾವತಿಸದೆ ವಂಚಿಸಲಾಗುತ್ತಿದ್ದು, ಸರಕಾರದಿಂದ ಗುತ್ತಿಗೆ ಪಡೆದಿರುವ ಏಜೆನ್ಸಿಗಳಿಂದ ನಿರಂತರ ಮೋಸ ನಡೆದಿದೆ ಎಂಬ ಆಕ್ರೋಶ ವ್ಯಕ್ತವಾಯಿತು. ಕಾರ್ಮಿಕ ಮುಖಂಡ ಭರತ್‍ಕುಮಾರ್ ನೇತೃತ್ವದಲ್ಲಿ ಆಡಳಿತ ಭವನದ ಎದುರು ಪ್ರತಿಭಟಿಸಿದ ನೌಕರರು, ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲೆಯ ಅಧಿಕಾರಿಗಳ ಮುಖಾಂತರ ಸರಕಾರಕ್ಕೆ ರವಾನಿಸಲು ಕೋರಿದರು.