ಕೂಡಿಗೆ, ಏ. 29: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದ ಗ್ರಾಮದೇವತೆ ಅಳುವಾರದಮ್ಮ (ಚೌಡೇಶ್ವರಿ) ದೇವಿಯ ವಾರ್ಷಿಕ ಪೂಜಾ ಮಹೋತ್ಸವ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಸ್ಥಾನದ ಪ್ರಧಾನ ಅರ್ಚಕ ಜೆ. ಚಂದ್ರಣ್ಣ ನೇತೃತ್ವದಲ್ಲಿ ದೇವರ ವಿಗ್ರಹಗಳಿಗೆ ಗಂಗಾಸ್ನಾನ, ಗಂಗೆ ಪೂಜೆ ನೆರವೇರಿಸಿ ಮಂಗಳವಾದ್ಯ ದೊಂದಿಗೆ ಊರಿನ ಪ್ರಮುಖ ಬೀದಿ ಯಲ್ಲಿ ಮೆರವಣಿಗೆ ನಡೆಸಲಾಯಿತು. ದೇವರ ವಿಗ್ರಹಗಳನ್ನು ಹೊತ್ತ ಪುರುಷರು ಹಾಗೂ ಕಲಶ ಹೊತ್ತ ಮಕ್ಕಳು ಮೆರವಣಿಗೆಯಲ್ಲಿ ಸಾಗಿದರು.
ನಂತರ ದೇವಿಯ ಬನದಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ದೇವರ ವಿಗ್ರಹಗಳಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಚಿಕ್ಕಅಳುವಾರದ ಅಳುವಾರದಮ್ಮ ದೇವಾಲಯ ಸಮಿತಿ ವತಿಯಿಂದ ದೇವಿಯ ಮೂಲ ಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯ ಗಳನ್ನು ನೆರವೇರಿಸಲಾಯಿತು. ಮಹಾಮಂಗಳಾರತಿ ನೆರವೇರಿಸಿ ನೆರೆದಿದ್ದ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು. ನಂತರ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ನಡೆಯಿತು.
ಹಬ್ಬದ ಅಂಗವಾಗಿ ದೇವಸ್ಥಾನ ಹಾಗೂ ಗ್ರಾಮವನ್ನು ತಳಿರು ತೋರಣಗಳಿಂದ, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸ ಲಾಗಿತ್ತು. ಗುರುವಾರ ರಾತ್ರಿ ವಿದ್ಯುತ್ ಅಲಂಕೃತ ಮಂಟಪದಲ್ಲಿ ಚೌಡೇಶ್ವರಿ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ದೇವರಾಜು ಉತ್ಸವ ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮದ್ದುಗುಂಡು ಹಾಗೂ ಪಟಾಕಿಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಬೇಡಿಕೆಗಳನ್ನು ಈಡೇರಿಸು ವಂತೆ ಹರಕೆ ಹೊತ್ತಿದ್ದ ಭಕ್ತರು ದೇವಿಗೆ ಹರಕೆ ಒಪ್ಪಿಸಿದರು. ದೇವಸ್ಥಾನದ ಆವರಣ ದಲ್ಲಿ ರಾತ್ರಿ ಗಂಟೆಗೆ ಝೇಂಕಾರ್ ಮೆಲೋಡಿಸ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಗ್ರಾಮ ದೇವತೆ ಹಬ್ಬದಲ್ಲಿ ಚಿಕ್ಕ ಅಳುವಾರ ಸೇರಿದಂತೆ ದೊಡ್ಡ ಅಳುವಾರ, ಅರಿಸಿನಗುಪ್ಪೆ, ಸಿದ್ದಲಿಂಗಪುರ, 6ನೇಹೊಸಕೋಟೆ, ತೊರೆನೂರು, ಹೆಬ್ಬಾಲೆ, ಸುತ್ತಮುತ್ತಲ ಭಕ್ತರು ಪಾಲ್ಗೊಂಡಿದ್ದರು.