ಮಡಿಕೇರಿ, ಏ. 26: ಇಲ್ಲಿನ ಕನ್ನಂಡಬಾಣೆಯ ಶ್ರೀ ದೃಷ್ಟಿ ಗಣಪತಿ ದೇವಾಲಯದ 15ನೇ ವರ್ಷದ ಪ್ರತಿಷ್ಠಾಪನಾ ಉತ್ಸವವು ನಿನ್ನೆ ಹಾಗೂ ಇಂದು ಜರುಗುವದರೊಂದಿಗೆ, ನೂತನವಾಗಿ ನಾಗದೇವರ ಪ್ರತಿಷ್ಠಾಪನೆ ನಡೆಯಿತು.
ಈ ಸಂಬಂಧ ನಿನ್ನೆ ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಃ, ಗಣಹೋಮ, ಅಥರ್ವಶೀರ್ಷಯಾಗ, ನವಗ್ರಹ ಪೂಜೆ, ಅನುಜ್ಞಾ ಕಲಶಾಭಿಷೇಕ, ಜೀವ ಕಲಶ ಪೂಜೆ, ಮಹಾಪೂಜೆ ನೆರವೇರಿತು. ಸಂಜೆ ಪ್ರಸಾದ ಶುದ್ಧಿ, ವಾಸ್ತು ಹೋಮ, ವಾಸ್ತು ಬಲಿ, ಬಿಂಬ ಶುದ್ಧಿ, ಕಲಶ ಪೂಜೆ, ದಾನ್ಯಾಧಿವಾಸ, ಬಿಂಬ ಶಯ್ಯಾಧಿವಾಸ, ಕ್ರಿಯೆಗಳೊಂದಿಗೆ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಇಂದು ಸನ್ನಿಧಿಯಲ್ಲಿ ಗಣಹೋಮ, ಪ್ರತಿಷ್ಠಾ ಪೂಜಾಧಿಗಳೊಂದಿಗೆ ಅಷ್ಟಬಂಧ ಬ್ರಹ್ಮ ಕಲಶ ಅಲಂಕಾರ ಪೂಜೆ, ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ನೆರವೇರಿತು. ಧಾರ್ಮಿಕ ವಿಧಿ ವಿದಾನಗಳೊಂದಿಗೆ ಜರುಗಿದ ದೇವತಾ ಕೈಂಕರ್ಯಗಳಲ್ಲಿ ಅಧಿಕ ಸಂಖ್ಯೆಯ ಸದ್ಭಕ್ತರು ಪಾಲ್ಗೊಂಡರು ದೃಷ್ಟಿ ಮಹಾ ಗಣಪತಿ ಹಾಗೂ ನಾಗದೇವರ ಕೃಪೆಗೆ ಪಾತ್ರರಾದರು.