ಸೋಮವಾರಪೇಟೆ,ಏ.26: ಗ್ರಾಮೀಣ ಜನಪದದ ಅವಿಭಾಜ್ಯ ಅಂಗವಾಗಿರುವ ವಾರ್ಷಿಕ ಸುಗ್ಗಿ ಉತ್ಸವಗಳು ಮಲೆನಾಡು ಭಾಗದಲ್ಲಿ ಸಂಭ್ರಮದಿಂದ ನಡೆಯುತ್ತಿದ್ದು, ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಸಾವಿರಾರು ಮಂದಿ ಸಾರ್ವಜನಿಕ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಇಂದು ನೆರವೇರಿತು.
ಕೂತಿನಾಡಿಗೆ ಸೇರಿದ ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಚಿಕ್ಕತೋಳೂರು, ಇನಕನಹಳ್ಳಿ, ಸಿಂಗನಳ್ಳಿ, ಹರಪಳ್ಳಿ, ನಡ್ಲಕೊಪ್ಪ, ದೊಡ್ಡಮನೆಕೊಪ್ಪ, ಕಂಬಳ್ಳಿ, ಊರೊಳಗಿನಕೊಪ್ಪ, ಕರಡಿಕೊಪ್ಪ ಸೇರಿದಂತೆ ಸುತ್ತಮುತ್ತಲ 19 ಗ್ರಾಮಗಳ ಗ್ರಾಮಸ್ಥರು ಒಂದೆಡೆ ಸೇರಿ ಗ್ರಾಮ ದೇವತೆಯಾದ ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಸುಗ್ಗಿ ಉತ್ಸವ ಸಾವಿರಾರು ಮಂದಿ ಆಸ್ತಿಕರ ಸಮಕ್ಷಮ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿತು.
ಮಲೆನಾಡು ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಉತ್ಸವÀವಾಗಿ ಹೆಸರು ಪಡೆದಿರುವ ಸುಗ್ಗಿ ಉತ್ಸವಕ್ಕೆ ಅಕ್ಕಪಕ್ಕದ ಜಿಲ್ಲೆಯವರೂ ಆಗಮಿಸುವದು ವಿಶೇಷ. ಸುಗ್ಗಿಯ ಕೊನೆಯ ದಿನದಂದು ವಿವಿಧೆಡೆ ನೆಲೆಸಿರುವ ಮಂದಿ ಗ್ರಾಮಕ್ಕೆ ಆಗಮಿಸುವದರಿಂದ ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ.
ತೋಳೂರುಶೆಟ್ಟಳ್ಳಿ ಗ್ರಾಮದ ನಡುಭಾಗದಲ್ಲಿರುವ ಸುಗ್ಗಿಬನದಲ್ಲಿ ನಿರ್ಮಿಸಿರುವ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಸುಗ್ಗಿ ಕಟ್ಟೆ ಎದುರು ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸ ಲಾಯಿತು.
ಪುಷ್ಪಗಿರಿ ಬೆಟ್ಟದಲ್ಲಿರುವ ಕುಮಾರಲಿಂಗೇಶ್ವರ ದೇವಾಲಯ ಹಾಗೂ
(ಮೊದಲ ಪುಟದಿಂದ) ಮುಳ್ಳಯ್ಯನಗಿರಿಗೆ ತೆರಳಿ ಮಳೆ ಕರೆಯುವ ಪದ್ದತಿಯೊಂದಿಗೆ ಪ್ರಾರಂಭವಾದ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವದಲ್ಲಿ, ಬೀರೇದೇವರ ಹಬ್ಬ, ಗುಮ್ಮನ ಮರಿ ಪೂಜೆ, ಬಾವಿಗದ್ದೆ ಊಟ, ಊರೊಡೆಯನ ಪೂಜೆ, ಔತಣ, ಕೊಂಡ ಹಾಯುವದು, ಮೊದಲ ಬೇಟೆ, ಊರು ಸುಗ್ಗಿ, ದೇವರ ಗಂಗಾ ಸ್ನಾನ, ಆವರಣ ಶೃಂಗಾರ, ನೆಂಟರ ಸುಗ್ಗಿ, ಹಗಲು ಸುಗ್ಗಿ, ಹೆದ್ದೇವರ ಸುಗ್ಗಿ ಸಾರು ವಿಧಿವಿಧಾನಗಳೊಂದಿಗೆ ಈ ವರ್ಷದ ತೋಳೂರುಶೆಟ್ಟಳ್ಳಿಯ ಹಗಲು ಸುಗ್ಗಿ ಸಂಭ್ರಮದಿಂದ ನಡೆಯಿತು. ತಾ. 28ರಂದು(ನಾಳೆ) ಹೆದ್ದೇವರ ಬನಕ್ಕೆ ಹಾಲೆರೆಯುವ ಮೂಲಕ ಈ ವರ್ಷದ ಸುಗ್ಗಿಗೆ ವಿದ್ಯುಕ್ತ ತೆರೆಬೀಳಲಿದೆ.
ಅನಾದಿಕಾಲದಿಂದಲೂ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಈ ಉತ್ಸವವನ್ನು ಆಚರಿಸುತ್ತಿದ್ದು, ಕಳೆದ 15 ದಿನಗಳಿಂದ ಗ್ರಾಮದಲ್ಲಿ ವಿವಿಧ ಕಟ್ಟುಪಾಡುಗಳನ್ನು ಅಳವಡಿಸಲಾಗಿತ್ತು. ಇಂದು ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತ ಪ್ರದಕ್ಷಿಣೆ ಮಾಡಿ, ಎಡೆ ಸಮರ್ಪಣೆ ನಂತರ ಮೆರವಣಿಗೆ ಮೂಲಕ ದೇವಾಲಯಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು.
ದೇವರ ಒಡೆಕಾರರಾದ ಡಿ.ಎನ್. ಸುಧಾಕರ್, ಡಿ.ಎಂ. ದಿಲೀಪ್, ಮೊದಲ ದೇವರ ಪೂಜಾ ಉಸ್ತುವಾರಿಯಾಗಿ ಶಿವಕುಮಾರ್, ನಿಶಾಂತ್ ಅವರುಗಳು ಕಳೆದ 15 ದಿನಗಳಿಂದ ವಿಶೇಷ ಶುದ್ಧಿಯೊಂದಿಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಊರಿಗೆ ಸಮಯಕ್ಕೆ ಸರಿಯಾಗಿ ಮಳೆ ಸುರಿದು ಉತ್ತಮ ಬೆಳೆ ಬೆಳೆಯಲಿ, ಜನ ಮತ್ತು ಜಾನುವಾರುಗಳಿಗೆ ಯಾವದೇ ರೀತಿಯ ತೊಂದರೆಯಾಗದಿರಲಿ ಎಂದು ಗ್ರಾಮಸ್ಥರು ಸಾಮೂಹಿಕವಾಗಿ ಪ್ರಾರ್ಥಿಸಿದರು.
ಶುಕ್ರವಾರದಂದು ಸಬ್ಬಮ್ಮ ದೇವಿಯ ಸನ್ನಿಧಿಯಲ್ಲಿ ಹಣ್ಣು ಕಾಯಿ ಹಾಗೂ ಮಡೇ ಉತ್ಸವ ನಡೆಯಿತು. ಗ್ರಾಮಸ್ಥರು ದೇವರಿಗೆ ಎಡೆಯನ್ನಿರಿಸಿ ಪೂಜೆ ಸಲ್ಲಿಸಿದರು. ನಂತರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕುವ ಸಂದರ್ಭ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಈಡುಗಾಯಿ ಸೇವೆ ಸಲ್ಲಿಸಿದರು.
ಗ್ರಾಮಸ್ಥರಿಂದ ಮೂಡಿಬಂದ ಸಾಂಪ್ರದಾಯಿಕ ಸುಗ್ಗಿ ಕುಣಿತ ಗ್ರಾಮೀಣ ಸೊಗಡಿನ ಜನಪದದ ಜೀವನ ಕ್ರಮವನ್ನು ಬಿಂಬಿಸುತ್ತಿತ್ತು. ಸುಗ್ಗಿ ಹಬ್ಬದ ಉಸ್ತುವಾರಿಯನ್ನು ಸಮಿತಿಯ ಅಧ್ಯಕ್ಷ ರಾಜಗೋಪಾಲ್, ಕಾರ್ಯದರ್ಶಿ ಡಿ.ಎಲ್.ಜಗದೀಶ್, ಖಜಾಂಚಿ ಮನೋಹರ್ ವಹಿಸಿದ್ದರು.
ಸುಗ್ಗಿ ಆಚರಣೆಯಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿರುವ ಸುಗ್ಗಿ ಕುಣಿತದಲ್ಲಿ ರಾಜ್ಯ ಮಟ್ಟದಲ್ಲಿ ಸುಗ್ಗಿ ಕುಣಿತ ಪ್ರದರ್ಶಿಸಿ ಗುರುತಿಸಿಕೊಂಡಿರುವ ಗ್ರಾಮದ ಎಸ್.ಪಿ. ಕುಟ್ಟಪ್ಪ, ಎಸ್.ಪಿ. ಮಾಚಯ್ಯ, ಎಚ್.ಕೆ. ಬಸವರಾಜು, ರಾಜಕುಮಾರ್, ಪ್ರಸಾದ್, ಪ್ರದೀಪ್, ಕೃಷ್ಣಪ್ಪ ಕಿರಣ್ ಮತ್ತು ತಂಡದವರು ಸಾಂಪ್ರದಾಯಿಕ ಧಿರಿಸಿನೊಂದಿಗೆ ಸುಗ್ಗಿ ಕುಣಿತವನ್ನು ಪ್ರದರ್ಶಿಸಿದರು. ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಉದ್ಯಮಿ ಹರಪಳ್ಳಿ ರವೀಂದ್ರ ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಸುಗ್ಗಿ ಉತ್ಸವದಲ್ಲಿ ಭಾಗವಹಿಸಿದ್ದರು.
-ವಿಜಯ್