ಮಡಿಕೇರಿ, ಏ. 26: ಇಲ್ಲಿನ ಪುಟಾಣಿನಗರದ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕ ಉತ್ಸವವು ಇಂದು ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. ಸನ್ನಿಧಿಯಲ್ಲಿ ಬೆಳಿಗ್ಗೆ ಹೋಮ, ಹವನಗಳೊಂದಿಗೆ ವಾರ್ಷಿಕ ಪೂಜೆ ನಡೆಸಲಾಯಿತು.
ಅಲ್ಲದೆ ದೇವಿಗೆ ವಿಶೇಷ ಅಲಂಕಾರದೊಂದಿಗೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಮಾಡಲಾಯಿತು. ಉತ್ಸವ ವೇಳೆ ದೇವಿಗೆ ಹರಕೆ- ಕಾಣಿಕೆ ಸಲ್ಲಿಸಿದ ಭಕ್ತರು ತ್ರಿವಿಧ ಪ್ರಸಾದ ಸ್ವೀಕರಿಸಿ ಪುನೀತರಾದರು.
ಬೇರೆ ಬೇರೆ ಕಡೆಗಳಿಂದ ಆಗಮಿಸಿದ ಭಕ್ತರು ವಿವಿಧ ಹರಕೆಗಳನ್ನು ಒಪ್ಪಿಸಿದರು. ಪುಟಾಣಿನಗರಕ್ಕೆ ಸೀಮಿತವಾಗಿ ಒಂದೊಮ್ಮೆ ಸ್ಥಳೀಯವಾಗಿ ಪೂಜೆಗೊಳ್ಳುತ್ತಿದ್ದ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಬೇರೆ ಬೇರೆಡೆಗಳಿಂದ ಹರಕೆ ತಂದು ಸಲ್ಲಿಸುತ್ತಿರುವದು ಇಲ್ಲಿನ ವಿಶೇಷ.