ಚೆಟ್ಟಳ್ಳಿ, ಏ. 26: ವೀರಾಜಪೇಟೆ ಸಮೀಪದ ಕಡಂಗ ಪ್ರೌಢ ಶಾಲಾ ಮೈದಾನದಲ್ಲಿ ಅರಫಾ ಫ್ರೆಂಡ್ಸ್ ವತಿಯಿಂದ ನಡೆಯುತ್ತಿರುವ 16 ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಸಿಟಿ ಬಾಯ್ಸ್ ಸಿದ್ದಾಪುರ ತಂಡವನ್ನು ಮಣಿಸಿ ಆಸನ್ ಗೋಣಿಕೊಪ್ಪ ತಂಡ ಸೆಮಿಫೈನಲ್‍ಗೆ ಅರ್ಹತೆ ಪಡೆಯಿತು.

ಮೊದಲು ಬ್ಯಾಟ್ ಮಾಡಿದ ಆಶಸ್ ಗೋಣಿಕೊಪ್ಪ ತಂಡವು ನಿಗದಿತ 04 ಓವರುಗಳಿಗೆ 38 ರನ್ ಗಳಿಸಿತು.

ಈ ಗುರಿಯನ್ನು ಬೆನ್ನಟ್ಟಿದ ಸಿದ್ದಾಪುರ ತಂಡವು ಆಶಸ್ ಗೋಣಿಕೊಪ್ಪ ತಂಡದ ಬೌಲಿಂಗ್ ದಾಳಿಯ ಎದುರು ಮಂಕಾಯಿತು. ಅಂತಿಮವಾಗಿ ಆಶಸ್ ಗೋಣಿಕೊಪ್ಪ ತಂಡ 1 ರನ್‍ಗಳ ರೋಚಕ ಗೆಲವು ಸಾಧಿಸಿ ಸೆಮಿಫೈನಲ್‍ಗೆ ಪ್ರವೇಶಿಸಿತು.

ಮೊದಲನೇ ಪಂದ್ಯಾಟವು ಹಟೆಕ್ ಬಾಯ್ಸ್ ಹಾಕತ್ತೂರು ಹಾಗೂ ಕೊಳಕೇರಿ ಫ್ರೆಂಡ್ಸ್ ನಡುವಿನ ಪಂದ್ಯದಲ್ಲಿ ಕೊಳಕೇರಿ ತಂಡವು 4 ಓವರ್‍ಗಳಿಗೆ 47 ರನ್ ಕಲೆ ಹಾಕಿತು. ಹಾಕತ್ತೂರು ತಂಡವು ಅಂತಿಮವಾಗಿ 11 ರನ್‍ಗಳ ಸೋಲು ಕಂಡಿತು.

ಕೌವ್ ಬಾಯ್ಸ್ ವೀರಾಜಪೇಟೆ ಹಾಗೂ ಎಡಪಾಲ ತಂಡಗಳ ನಡುವಿನ ಪಂದ್ಯದಲ್ಲಿ ಎಡಪಾಲ ತಂಡವು 4 ಓವರುಗಳಿಗೆ 23 ರನ್ ಗಳಿಸಿದರು.

ವೀರಾಜಪೇಟೆ ತಂಡವು 2 ಓವರ್ ಮೂರು ಎಸೆತಗಳಿಗೆ ಗುರಿ ತಲಪಿ ಮುಂದಿನ ಹಂತ ಪ್ರವೇಶಿಸಿತು.

ಕೆ.ವೈ.ಸಿ.ಸಿ. ಕಡಂಗ ಹಾಗೂ ಹಳೇ ತಾಲೂಕು ನಡುವಿನ ಪಂದ್ಯದಲ್ಲಿ ಕಡಂಗ ತಂಡವು 4 ಓವರ್‍ಗಳಿಗೆ 49 ರನ್ ಕಲೆಹಾಕಿತು. ಹಳೇ ತಾಲೂಕು ತಂಡವು 12 ರನ್‍ಗಳ ಸೋಲು ಕಂಡಿತು.

ಆತಿಥೇಯ ಅರಫಾ ಹಾಗೂ ಕೊಳಕೇರಿ ತಂಡಗಳ ನಡುವಿನ ಪಂದ್ಯದಲ್ಲಿ ಕೊಳಕೇರಿ ತಂಡವು 4 ಓವರುಗಳಿಗೆ 47 ರನ್ ಕಲೆ ಹಾಕಿತು.

ಅರಫಾ ತಂಡ ನೌಷಾದ್ ಅವರ ಅಮೋಘ ಆಟದಿಂದ ಯಾವದೇ ನಷ್ಟವಿಲ್ಲದೆ ಮೂರು ಓವರುಗಳಿಗೆ ಗುರಿ ತಲಪಿತು.

ಆತಿಥೇಯ ಅರಫಾ ತಂಡವು ಡೆಕ್ಕನ್ ನಾಪೋಕ್ಲು ತಂಡವನ್ನು ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಮಣಿಸಿ ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆಯಿತು.

ಮುಸ್ಲಿಂ ಕಪ್ ಕ್ರಿಕೆಟ್ ಇತಿಹಾಸದಲ್ಲಿ ಏಳು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಫ್ರೀಡಂ ಬಾಯ್ಸ್ ಹುಂಡಿ ತಂಡವನ್ನು ಡೆಕ್ಕನ್ ನಾಪೋಕ್ಲು ತಂಡ ಮಣಿಸಿತು.

- ಕೆ.ಎಂ. ಇಸ್ಮಾಯಿಲ್ ಕಂಡಕರೆ