ಮಡಿಕೇರಿ, ಏ. 26: ಕೊಡಗು ಜಿಲ್ಲೆಯ ಕ್ರೀಡಾಪ್ರೇಮಿಗಳು ಹಾಗೂ ಕ್ರೀಡಾಪಟುಗಳು ಬಹಳ ಕಾತುರದಿಂದ ಕಾಯುತ್ತಿದ್ದ ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟ ತಾ. 27ರಿಂದ (ಇಂದಿನಿಂದ) ಮೇ 2ರವರೆಗೆ ಸಿದ್ದಾಪುರ ಸಮೀಪದ ಕರಡಿಗೋಡಿನ ಕುಕ್ಕನೂರು ಪಿ. ಪುರುಷೋತ್ತಮ ಹಾಗೂ ದೇವಪ್ರಕಾಶ್ ಅವರ ಮೈದಾನದಲ್ಲಿ ನಡೆಯಲಿದೆ.

ಸಿಟಿ ಬಾಯ್ಸ್ ಯುವಕ ಸಂಘ ಕಳೆದ ಮೂರು ವರ್ಷಗಳಿಂದ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾಟವನ್ನು ನಡೆಸುತ್ತಾ ಬಂದಿದೆ.

ಕೆಸಿಎಲ್ ಪಂದ್ಯಾಟವು ಐಪಿಎಲ್ ಮಾದರಿಯಲ್ಲಿ ನಡೆಯಲಿದೆ. ಆಟಗಾರರನ್ನು ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗಿದೆ. ಅಂತಿಮವಾಗಿ 203 ಆಟಗಾರರು ಕೆ.ಸಿ.ಎಲ್. ನಾಲ್ಕನೇ ಆವೃತ್ತಿಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.

ವಿಜೇತ ತಂಡಕ್ಕೆ ಒಂದು ರೂ. ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಪ್ರಶಸ್ತಿ ವಿಜೇತ ತಂಡಕ್ಕೆ ರೂ 50 ಸಾವಿರ ನಗದು, ಅಲ್ಲದೇ ಸರಣಿ ಶ್ರೇಷ್ಠ ಪ್ರಶಸ್ತಿ ವಿಜೇತ ಆಟಗಾರನಿಗೆ ಟಚ್ ಸ್ಕ್ರೀನ್ ಮೊಬೈಲ್ ಕೊಡುಗೆಯಾಗಿ ನೀಡಲಾಗುತ್ತಿದೆ.

14 ತಂಡಗಳು ಈ ಬಾರಿಯ ಕೆಸಿಎಲ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ತಲಾ 7 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯುತ್ತಿದ್ದು, ಅಂತಿಮವಾಗಿ ಎರಡು ಗ್ರೂಪಿನ ಮೊದಲೆರೆಡು ಸ್ಥಾನಗಳಿಸಿದ ತಂಡ ಪ್ಲೇ ಆಫ್‍ಗೆ ಅರ್ಹತೆ ಪಡೆಯುತ್ತದೆ. ಪ್ಲೇ ಆಫ್ ಪಂದ್ಯವು ಐಪಿಎಲ್ ಮಾದರಿಯಲ್ಲಿ ನಡೆಯಲಿದೆ.

ಗೋಣಿಕೊಪ್ಪಲುವಿನ ಬ್ಲ್ಯಾಕ್ ತಂಡರ್, ಆಶ್ಯಸ್ ಗೋಣಿಕೊಪ್ಪ, ಸಿದ್ದಾಪುರದ ಟೀಂ ಕೂಲ್, ಫಯರ್ ಟೈಗರ್ಸ್, ಮಡಿಕೇರಿಯ ಸ್ಪೋಟ್ರ್ಸ್ ವಲ್ರ್ಡ್, ತ್ಯಾಗ್ ಬಾಯ್ಸ್, ನೆಲ್ಲಿಹುದಿಕೇರಿಯ ಝಲ್ಲಾ ಕ್ರಿಕೆಟರ್ಸ್, ಗ್ರೀನ್ ಕ್ರಿಕೆಟರ್ಸ್, ರೇಂಬೋ ಕ್ರಿಕೆಟರ್ಸ್, ಕಳತ್ಮಾಡುವಿನ ವಿರಾಟ್ ಕ್ರಿಕೆಟರ್ಸ್ , ಕರಡಿಗೋಡಿನ ಕುಕ್ಕನೂರು ರಾಯಲ್, ಬೆಟ್ಟದಕಾಡುವಿನ ಬ್ಲ್ಯಾಕ್ ವಾರಿಯರ್ಸ್, ತ್ಯಾಗತ್ತೂರಿನ ಕೂರ್ಗ್ ಫ್ರೆಂಡ್ಸ್ ಹಾಗೂ ಮೂರ್ನಾಡುವಿನ ಎಸ್.ಆರ್.ಎಸ್.ತಂಡಗಳು ಭಾಗವಹಿಸಿಲಿವೆ.