ಗೋಣಿಕೊಪ್ಪಲು, ಏ.26: ಕಾಡು ಹಂದಿ ದಾಳಿಗೆ ಸಿಲುಕಿ ತೊಂದರೆಗೀಡಾಗಿದ್ದ ಕೂಲಿ ಕಾರ್ಮಿಕ ಸುರೇಶ್ ಎಂಬವರ ಪುತ್ರಿ ಲಕ್ಷ್ಮಿ ಎಂಬ ಬಾಲಕಿಯ ನೆರವಿಗೆ ಅರಣ್ಯ ಅಧಿಕಾರಿಗಳು ದಾವಿಸಿದ್ದು, ಘಟನಾ ಸ್ಥಳವಾದ ಕಿರುಗೂರುವಿಗೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳಾದ ಆರ್.ಎಫ್‍ಓ. ಅಶೋಕ್, ಗಣಪತಿ ಹಾಗೂ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿದರು.

ಪೊನ್ನಂಪೇಟೆ ಸಮೀಪದ ಕಿರುಗೂರು ಹೊನ್ನಿಕೊಪ್ಪಲುವಿಗೆ ಫೆ.12ರಂದು ಮುಂಜಾನೆ ಮನೆಯ ಸಮೀಪ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬಾಲಕಿಯ ಮೇಲೆ ಕಾಫಿ ತೋಟದಲ್ಲಿದ್ದ ಕಾಡು ಹಂದಿ ಏಕಾಎಕಿ ಧಾಳಿ ನಡೆಸಿತ್ತು. ಈ ಸಂದರ್ಭ ಗಂಭೀರ ಗಾಯವಾಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಗೆ ಪರಿಹಾರ ವಿತರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆ ಮಾಡ ಮಂಜುನಾಥ್ ಆಗ್ರಹಿಸಿದರು.

ಹಲವು ಸಮಯ ಕಳೆದರೂ ಈ ಬಗ್ಗೆ ಪರಿಹಾರ ವಿತರಿಸುವಲ್ಲಿ ಅರಣ್ಯ ಇಲಾಖೆ ವಿಳಂಬ ಮಾಡಿತ್ತು. ಇದೀಗ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್,ಸದಸ್ಯರಾದ ಗಾಡಂಗಡ ಉತ್ತಯ್ಯ,ಎಂ.ಬಿ.ಅಶೋಕ್, ಎಂ.ಬಿ.ಪ್ರಕಾಶ್,ಮುತ್ತುಮಣಿ, ಮುಂತಾದವರು ಹಾಜರಿದ್ದರು.

-ಹೆಚ್.ಕೆ.ಜಗದೀಶ್