ಗೋಣಿಕೊಪ್ಪ ವರದಿ, ಎ. 27 : ಅಂಬೇಡ್ಕರ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಸೆವೆನ್ ಸೈಡ್ ಮುಕ್ತ ಕಾಲ್ಚೆಂಡು ಪಂದ್ಯಾವಳಿಯಲ್ಲಿ 2 ತಂಡಗಳು ಸೆಮಿಗೆ ಪ್ರವೇಶ ಪಡೆಯಿತು.

ಅಮ್ಮತ್ತಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಿವೈಸಿ ಒಂಟಿಯಂಗಡಿ ಹಾಗೂ ಚೌಡೇಶ್ವರಿ ಬಿ. ತಂಡಗಳು ಸೆಮಿ ಫೈನಲ್‍ಗೆ ಪ್ರವೇಶ ಪಡೆದುಕೊಂಡವು.

ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಸಿವೈಸಿ ಒಂಟಿಯಂಗಡಿ ತಂಡವು ಮರಗೋಡು ವೈಷ್ಣವಿ ತಂಡವನ್ನು 4-0 ಗೋಲುಗಳಿಂದ ಮಣಿಸಿ ಸೆಮಿಗೆ ಲಗ್ಗೆ ಇಟ್ಟಿತು. ಮತ್ತೊಂದು ಕ್ವಾರ್ಟರ್ ಫೈನಲ್‍ನಲ್ಲಿ ಚೌಡೇಶ್ವರಿ ಬಿ. ತಂಡವು ಸುಂಟಿಕೊಪ್ಪ ಸಿಟಿಬಾಯ್ಸ್ ತಂಡದ ವಿರುದ್ಧ 4-2 ಗೋಲುಗಳ ಜಯ ಸಾಧಿಸಿ ಸೆಮಿಗೆ ಪ್ರವೇಶ ಪಡೆಯಿತು.

ಇದಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ಅಮ್ಮತ್ತಿ ಮಿಲನ್ ಬಾಯ್ಸ್, ನೆಹರು, ಎ.ಎಸ್.ಆರ್.ಸಿ ತಂಡಗಳು ಗೆಲುವು ಪಡೆದು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.

ಅಮ್ಮತ್ತಿ ಮಿಲನ್ ಬಾಯ್ಸ್ ತಂಡವು ಮಾತೃಭೂಮಿ ಟೈಗರ್ಸ್ ವಿರುದ್ಧ 6-0 ಗೋಲುಗಳ ಗೆಲುವು ಪಡೆಯಿತು. ನೆಹರು ತಂಡವು ಅಮ್ಮತ್ತಿ ಮಾರ್ಕೆಟ್ ಬಾಯ್ಸ್ ವಿರುದ್ದ 6-0 ಗೋಲುಗಳ ಜಯ ಸಾಧನೆ ಮಾಡಿತು.

ಎ.ಎಸ್.ಆರ್.ಸಿ. ತಂಡವು ಪಾಲಿಬೆಟ್ಟ ರೋಜರ್ ತಂಡವನ್ನು 3-2 ಗೋಲುಗಳ ಮೂಲಕ ಮಣಿಸಿತು.

ಭಾನುವಾರ ಮದ್ಯಾಹ್ನ 1 ಕ್ಕೆ ಮಹಿಳೆಯರಿಗೆ ಫುಟ್ಬಾಲ್ ಆಟ ನಡೆಯಲಿದೆ. ಲಯನ್ಸ್ ಹಾಗೂ ಮರಗೋಡು ಮಹಿಳೆಯರ ತಂಡ ಮಹಿಳಾ ಫುಟ್ಭಾಲ್‍ನಲ್ಲಿ ಪಾಲ್ಗೊಳ್ಳಲಿದೆ. 40 ವರ್ಷ ಮೇಲ್ಪಟ್ಟ ಪುರುಷರಿಗೆ ಪ್ರದರ್ಶನ ಪಂದ್ಯ ಮಧ್ಯಾಹ್ನ 2 ಕ್ಕೆ ನಡೆಯಲಿದೆ. ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ಹಾಗೂ ಬ್ಲೂಬಾಯ್ಸ್ ಸುಂಟಿಕೊಪ್ಪ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. -ಸುದ್ದಿಪುತ್ರ