ಮಡಿಕೇರಿ, ಏ. 27: ಭೂಮಿ ಪ್ರಾಕೃತಿಕ ಸಂಪತ್ತಾಗಿದ್ದು, ಭೂಮಿ ಇಲ್ಲದೆ ಮಾನವನ ಬದುಕು ಊಹಿಸುವದು ಅಸಾಧ್ಯ. ಆದ್ದರಿಂದ ಭೂಮಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ಮನು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಅರಣ್ಯ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ‘ವಿಶ್ವ ಭೂಮಿ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾನವನ ಅತೀ ಆಸೆಯಿಂದ ಜೀವ ಸಂಕುಲ ಅವನತಿಯತ್ತ ಸಾಗುತ್ತಿದೆ. ಹಾಗೆಯೇ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದನ್ನು ತಡೆಯಬೇಕು. ಭೂಮಿಯ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಮಂಜುನಾಥ್ ಮಾತನಾಡಿ ನಮ್ಮ ಮನೆಯಂತೆ ಭೂಮಿಯನ್ನು ಸಂರಕ್ಷಣೆ ಮಾಡಬೇಕು. ಪ್ಲಾಸ್ಟಿಕ್‍ನ್ನು ಮರು ಬಳಕೆ ಮಾಡುವದು ಕಷ್ಟಸಾಧ್ಯ. ಆದ್ದರಿಂದ ಪ್ಲಾಸ್ಟಿಕ್‍ನ್ನು ಉಪಯೋಗಿಸಲೇಬಾರದು. ಜೀವ ಸಂಕುಲ ಉಳಿಯಲು ಭೂಮಿ ಉಳಿಸಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವರ್ಧನ್ ಸಿಂಗ್ ಮಾತನಾಡಿ ಪ್ರಾಕೃತಿಕ ಸಂಪತ್ತನ್ನು ಉಳಿಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭೂಮಿ ತಾಯಿಯಂತೆ. ಭೂಮಿ ಎಲ್ಲವನ್ನು ನೀಡಿದೆ. ಅದನ್ನು ಸಂರಕ್ಷಣೆ ಮಾಡಬೇಕು ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್‍ನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ ಭೂಮಿ ಸಂರಕ್ಷಣೆ ಬಗ್ಗೆ ಪ್ರತಿನಿತ್ಯ ಜಾಗೃತಿ ವಹಿಸಬೇಕು. ಮಾನವನ ದುರಾಸೆಯಿಂದ ವಿಶ್ವದಲ್ಲಿ 10 ಲಕ್ಷ ಜೀವ ಪ್ರಬೇಧಗಳು ವಿನಾಶದ ಅಂಚಿನಲ್ಲಿವೆ ಎಂದು ತಿಳಿಸಿದರು.

ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕರಾದ ಟಿ.ಜಿ. ಪ್ರೇಮಕುಮಾರ್ ಮಾತನಾಡಿ ಇಡೀ ವಿಶ್ವದಲ್ಲಿ ಪಶ್ಚಿಮಘಟ್ಟ ಪ್ರದೇಶವು 12 ನೇ ಸ್ಥಾನ. ಹಾಗೂ ದೇಶದಲ್ಲಿ ಎರಡನೇ ಸ್ಥಾನ ಹೊಂದಿದೆ. ಆದ್ದರಿಂದ ಪಶ್ಚಿಮಘಟ್ಟ ಪ್ರದೇಶ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದರು.

ಪರಿಸರ ಜಾಗೃತಿ ಆಂದೋಲನದ ಉಪಾಧ್ಯಕ್ಷ ಎಂ.ಇ. ಮೊಹಿದ್ದೀನ್ ಮಾತನಾಡಿ ಪಶ್ಚಿಮ ಘಟ್ಟ ಪ್ರದೇಶವು ಸುಮಾರು 1600 ಕಿ.ಮೀ. ಉದ್ದ ಹಾಗೂ 1.60 ಲಕ್ಷ ಚದರ ಕಿ.ಮೀ. ವ್ಯಾಪ್ತಿಯನ್ನು ಆವರಿಸಿದೆ. ಇದನ್ನು ಸಂರಕ್ಷಣೆ ಮಾಡಬೇಕು ಎಂದು ಹೇಳಿದರು. ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಕೃತಿ ಸಂಪನ್ಮೂಲವನ್ನು ಸಂರಕ್ಷಣೆ ಮಾಡಬೇಕು ಎಂದರು.

ವಿಶ್ವ ಭೂಮಿ ದಿನಾಚರಣೆಯ ಸಂದೇಶದ ಪ್ರತಿಜ್ಞಾ ವಿಧಿಯನ್ನು ಟಿ.ಜಿ. ಪ್ರೇಮಕುಮಾರ್ ಭೋದಿಸಿದರು. ಇದೇ ಸಂದರ್ಭದಲ್ಲಿ ವಿಶ್ವ ಭೂಮಿ ದಿನಾಚರಣೆ ಪ್ರಯುಕ್ತ ಹೊರತಂದಿರುವ ಕರಪತ್ರ ಬಿಡುಗಡೆ ಮಾಡಲಾಯಿತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಿಣ್ಣಪ್ಪ, ನೆಹರು, ದಯಾನಂದ, ಸೀಮಾ, ವಲಯ ಅರಣ್ಯಾಧಿಕಾರಿ ಜಗದೀಶ್ ಇತರರು ಇದ್ದರು.

ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎ. ಜಯಪ್ಪ ನಿರೂಪಿಸಿದರು. ಶಿಕ್ಷಕ ಸಿ.ಎ. ಸುರೇಶ್ ಸ್ವಾಗತಿಸಿದರು. ಶಿಕ್ಷಕಿಯರಾದ ಮಾಲಾದೇವಿ ಮತ್ತು ಎಚ್.ಎಂ.ಭಾರತಿ ಅವರು ಪರಿಸರ ಗೀತೆ ಹಾಡಿದರು. ಎಂ.ಇ. ಮೊಹಿದ್ದೀನ್ ವಂದಿಸಿದರು.