ಹೌದು, ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ; ದೇವರಿಗೆ ತ್ರಿಕಾಲ ಪೂಜೆಯೊಂದಿಗೆ ಸಮರ್ಪಿಸುವ ನೈವೇದ್ಯವನ್ನು ಸರಿ ಸುಮಾರು ಅರ್ಧ ಶತಮಾನದ ಕಾಲ ನಿತ್ಯ ತಯಾರಿಸುವದರೊಂದಿಗೆ ಭಗವಂತನ ಅನುಗ್ರಹ ಪಡೆದವರು ಮುದ್ದು ಬೈಲು (ಬಯಲು) ಚಂದ್ರಶೇಖರಯ್ಯ, ಅವರೇ ಹೇಳುವಂತೆ ಸುಮಾರು ನಾಲ್ಕುನೂರು ವರ್ಷಗಳ ಹಿಂದೆ ನೆರೆಯ ತುಳುನಾಡಿನಿಂದ ಬಂದ ಕುಟುಂಬ ಇವರದ್ದು; ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ದಿನಗಳಲ್ಲೇ ಪರಿಚಿತರೊಬ್ಬರ ಮೂಲಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ದೇವರಿಗೆ ನೈವೇದ್ಯ ಕೆಲಸಕ್ಕೆ ಸೇರಿಕೊಂದÀರು.

ಆ ಕಾಲದಲ್ಲಿ ದೇವಾಲಯದ ತುಂಬಾ ಬ್ರಾಹ್ಮಣ ಅರ್ಚಕರಿದ್ದರು. ನಿತ್ಯವೂ ರುದ್ರ ಪಾರಾಯಣದೊಂದಿಗೆ ಸಮಾರಾಧನೆ, ಅನ್ನಸಂತರ್ಪಣೆಯೂ ನಡೆಯುತ್ತಿತ್ತು. ಮಧ್ಯಾಹ್ನದ ವೇಳೆ ಬ್ರಾಹ್ಮಣ ಕುಟುಂಬಗಳ ಸಹಿತ ಎಲ್ಲ ನೌಕರರಿಗೆ ನಿತ್ಯ ಸನ್ನಿಧಿಯಲ್ಲಿ ದಾಸೋಹವಿದ್ದು, ಭಕ್ತರಿಗೂ ಊಟದ ವ್ಯವಸ್ಥೆ ಇತ್ತು. ಬೆಳಿಗ್ಗೆ ಮತ್ತು ರಾತ್ರಿ ಸನ್ನಿಧಿ ಅರ್ಚಕರ ಕುಟುಂಬ, ಹೊರಾಂಗಣ ನೌಕರರ ಸಹಿತ ಸರಾಸರಿ 25 ರಿಂದ 30 ಮಂದಿ ಊಟ ಮಾಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ, ಸೋಮವಾರಗಳಂದು ಶಿವ ಪ್ರೀತ್ಯಾರ್ಥವಾಗಿ ಒಡೆ - ಪಾಯಸ ಸೇವೆಯೊಂದಿಗೆ ಎಲ್ಲರೂ ಸಂತೋಷದಿಂದ ಸವಿದು ನೆಮ್ಮದಿ ಕಂಡುಕೊಂಡಿದ್ದರು.

ಎಡೆ ಎಡೆಯಲ್ಲಿ ಭಕ್ತರೂ ವಿವಿಧ ಪೂಜೆಗಳನ್ನು ಏರ್ಪಡಿಸಿ ವಿಶೇಷ ಸಮಾರಾಧನೆಯೊಂದಿಗೆ ಬ್ರಾಹ್ಮಣ ವರ್ಗವನ್ನು ಸಂತಸಪಡಿಸುತ್ತಿದ್ದರು. ಇಲ್ಲಿ ಜರುಗುತ್ತಿದ್ದ ಎಲ್ಲ ಸೇವೆಗಳಿಗೂ ಪೂರಕ ನೈವೇದ್ಯ ತಯಾರಿಸುವ ಕಾಯಕ ಮಾತ್ರ ಮುದ್ದು ಬೈಲು ಚಂದ್ರಶೇಖರಯ್ಯ ಅವರದ್ದಾಗಿತ್ತು.

ಅಕ್ಕಿ ಇಲ್ಲ : ಈಗಿನಂತೆ ದೇವರಿಗೆ ನೈವೇದ್ಯ ಮತ್ತು ಅರ್ಚಕ ನೌಕರರಿಗೆ ಅಂಗಡಿ ಅಕ್ಕಿ ಖರೀದಿಸಿ ನೀಡುವ ಕ್ರಮ ಇರಲಿಲ್ಲ; ಬದಲಾಗಿ ದೇವಾಲಯಕ್ಕೆ ಸಂಬಂಧಿಸಿದ ಗದ್ದೆಗಳಿಂದ ಸಂಗ್ರಹಗೊಂಡ ಭತ್ತದಿಂದ ಅಕ್ಕಿ ತಯಾರಿಸಿ, ಆ ಮೂಲಕ ನೈವೇದ್ಯ ತಯಾರಾಗುತ್ತಿತ್ತು. ಆ ನೈವೇದ್ಯ ಅನ್ನಕ್ಕೆ ಸಾಂಬಾರು, ಚಟ್ನಿ ತಯಾರಿಸಿ ಉಣ ಬಡಿಸಲಾಗುತ್ತಿತ್ತು. ಅರ್ಚಕ - ನೌಕರರ ಕುಟುಂಬಕ್ಕೂ ಸನ್ನಿಧಿಯಿಂದ ನಿತ್ಯ ಆಹಾರ ವ್ಯವಸ್ಥೆಯಿತ್ತು.

ಸಂಬಳಕ್ಕಾಗಿ ಅಲ್ಲ - ಸೇವೆ : ಆ ದಿನಗಳಲ್ಲಿ ಕನಿಷ್ಟ ಮೂರು ರೂ. ಗಳಿಂದ 10 ರೂ. ಸಂಬಳ; ಅದು ಸೇವಾಭಾವದಿಂದ ಇದ್ದ ಕಾಯಕವಾಗಿತ್ತು. ನಿರಂತರವಾಗಿ 1948ರ ಅವಧಿಯಿಂದ 1998ರ ತನಕವೂ ಎಲ್ಲರ ಅಚ್ಚುಮೆಚ್ಚಿನ ಚಂದ್ರಶೇಖರಯ್ಯ ಅವರು ಓಂಕಾರೇಶ್ವರನಿಗೆ ನೈವೇದ್ಯದೊಂದಿಗೆ, ಇತರೆಲ್ಲರಿಗೆ ಹಸಿವು ನಿವಾರಿಸುವ ವಾತ್ಸಲ್ಯ ಮೂರ್ತಿಯಾಗಿದ್ದವರು. ನಿವೃತ್ತಿ ವೇಳೆಗೆ ತ್ರಿಕಾಲ ನೈವೇದ್ಯ ಸೇವೆಗಾಗಿ ಲಭಿಸುತ್ತಿದ್ದ ಸಂಭಾವನೆ ಮಾತ್ರ ಮಾಸಿಕ ರೂ. 350. ಅಷ್ಟಕ್ಕೆ ತೃಪ್ತಿಗೊಂಡು ತಮ್ಮ ಇಳಿವಯಸ್ಸಿನಲ್ಲಿ ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ಮುದ್ದುಬೈಲು ಮನೆ ಸೇಡಿಕೊಂಡಿದ್ದಾರೆ.

ಶತಮಾನದ ಬದುಕು : ಈಗ ಶತಮಾನದ ಅಂಚಿನಲ್ಲಿರುವ ಈ ಮುಪ್ಪಿನ ಜೀವಕ್ಕೆ ಅಷ್ಟಾಗಿ ಏನೂ ಸರಿಯಾಗಿ ಕೇಳುವದಿಲ್ಲ; ಆದರೆ ದೃಷ್ಟಿ ಸ್ಪಷ್ಟವಿದೆ. ಹೀಗಾಗಿ ಯಾರಾದರೂ ಇವರೊಂದಿಗೆ ಮಾತನಾಡುವಾಗ, ಅದನ್ನು ಹಾಳೆಯಲ್ಲಿ ಬರೆದುಕೊಟ್ಟರೆ, ಇಂದಿಗೂ ಕನ್ನಡಕ ಕೂಡ ಧರಿಸದೆ ಸರಾಗÀ ಓದಿ ಉತ್ತರಿಸುವ ಮೂಲಕ ಸಂದೇಹÀಗಳನ್ನು ನಿವಾರಿಸುತ್ತಾರೆ.

ಹಿಂದಿನ ಜೀವನ ಕ್ರಮ, ಜನತೆಯಲ್ಲಿ ದೇವರ ಬಗ್ಗೆ, ಗುರು ಹಿರಿಯರಲ್ಲಿ ಇದ್ದ ಭಯ - ಭಕ್ತಿ ಇತ್ಯಾದಿಗಳನ್ನು ನೆನಪಿಸಿಕೊಳ್ಳುತ್ತಾ, ತೀರಾ ಕೃಶಕಾಯ ಶರೀರದೊಂದಿಗೆ ಜೀವನ ಸವೆಸುತ್ತಿದ್ದಾರೆ. ಮುಪ್ಪಿನಲ್ಲಿಯೂ ಸಹಜ ಭಾವದಿಂದ ನಡೆದಾಡುತ್ತಾ; ಆಗೊಮ್ಮೆ ಈಗೊಮ್ಮೆ ಮಡಿಕೇರಿಗೆ ಬಂದು ಹೋಗುವ ಬಂಧು ವರ್ಗದಿಂದ ದೇವಾಲಯದ ಬಗ್ಗೆ ವಿಚಾರಿಸಿ ತಿಳಿದುಕೊಳ್ಳುತ್ತಾರೆ.

ಕೊರಗು : ಆ ದಿನಗಳಲ್ಲಿ ದೇವಾಲಯಕ್ಕೆ ಬೇಕಷ್ಟು ಗದ್ದೆ, ಜಾಗದೊಂದಿಗೆ ದೇವರ ಪೂಜೆಗೆ ಬೇಕಾದ ಎಲ್ಲ ಸಂಪತ್ತು ಇತ್ತಂತೆ; ಇಂದು ಸರಕಾರದ ನೀತಿ ಬದಲಾಗುತ್ತಾ; ಗದ್ದೆ ಜಾಗವೆಲ್ಲ ಉಳುವವನ ಪಾಲಾಗಿದ್ದರಿಂದ ದೇವರ ಉತ್ಸವ, ದೈನಂದಿನ ಕೈಂಕರ್ಯಗಳಿಗೆ ಕೊರತೆಯೊಂದಿಗೆ ಎಲ್ಲವೂ ತೋರಿಕೆಗೆ ಮಾಡಬೇಕಾಗಿದೆ ಎಂದು ನೋವಿನಿಂದ ನುಡಿಯುತ್ತಾ; ಕಳೆದು ಹೋದ ಜೀವನದತ್ತ ಮೆಲಕು ಹಾಕುತ್ತಾ, ಬದಲಾಗುತ್ತಿರುವ ಸಮಾಜದ ಕಟ್ಟುಪಾಡುಗಳ ಬಗ್ಗೆ ವಿಷಾದದೊಂದಿಗೆ ಕೊರಗಿನಲ್ಲಿ ದಿನ ದೂಡುತ್ತಿದ್ದಾರೆ. ಈ ಮುದ್ದುಬೈಲು ಮುಪ್ಪಿನ ಚಂದ್ರಶೇಖರಯ್ಯ.