ಸುಂಟಿಕೊಪ್ಪ, ಏ. 26: ಕಳೆದ ಹಲವಾರು ದಿನಗಳಿಂದ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ನಗರದ ರಸ್ತೆ ಬದಿಯಲ್ಲಿ 84 ವರ್ಷದ ಎಂ.ಕೆ.ಶ್ರೀಧರ್ ಎಂಬ ವೃದ್ಧರೊಬ್ಬರು ಅನಾಥವಾಗಿ ಅಲೆದಾಡುತ್ತಿದ್ದುದ್ದನ್ನು ಕಂಡು ಸ್ಥಳೀಯ ಉದ್ಯಮಿಗಳು ಮತ್ತು ಸಾರ್ವಜನಿಕರು ಅವರನ್ನು ವಿಚಾರಿಸಿದ್ದಾರೆ.

ಈ ಸಂದರ್ಭ ಯಾರೂ ವಾರಸುದಾರರು ಇಲ್ಲದಿರುವದನ್ನು ಮನಗಂಡ ಸಾರ್ವಜನಿಕರು ಈ ವ್ಯಕ್ತಿಯನ್ನು ರಕ್ಷಿಸಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಉಪ ನಿರೀಕ್ಷಕ ಮಹೇಶ್ ಮತ್ತು ಸಿಬ್ಬಂದಿ ರಾಜೇಶ್ ಅವರ ಸಹಕಾರದಿಂದ ಕೊಡಗು ಜಿಲ್ಲೆಯಲ್ಲಿ ಅನಾಥರನ್ನು ರಕ್ಷಿಸಿ ಅವರಿಗೆ ಸೂರು ಕಲ್ಪಿಸಿಕೊಡುವದರಲ್ಲಿ ಮುಂದಿರುವ ಮಡಿಕೇರಿಯ ವಿಕಾಸ್ ಜನಸೇವಾ ಟ್ರಸ್ಟಿನ ಅಧ್ಯಕ್ಷ ರಮೇಶ್ ಅವರನ್ನು ದೂರವಾಣಿ ಮೂಲಕ ಭೇಟಿ ಮಾಡಿ ಸಹಾಯ ಕೇಳಲಾಯಿತು.

ವಿಕಾಸ್ ಜನಸೇವಾ ಟ್ರಸ್ಟಿನ ಅಧ್ಯಕ್ಷ ರಮೇಶ್ ಹಾಗೂ ಟ್ರಸ್ಟಿನ ಜೀವನದಾರಿ ಆಶ್ರಮದ ಸಿಬ್ಬಂದಿ ಗಾಯನ ಅವರುಗಳು ಸ್ಥಳಕ್ಕೆ ಧಾವಿಸಿ ವೃದ್ಧನ ಪೂರ್ವಪರವನ್ನು ವಿಚಾರಿಸಿ ಅವರಿಗೆ ಯಾರು ವಾರಸ್ತುದಾರರಿಲ್ಲದಿರವದನ್ನು ಮನಗಂಡು ಸುಂಟಿಕೊಪ್ಪದಲ್ಲಿರುವ ಜನಸೇವಾ ಟ್ರಸ್ಟಿನ ಉಪಶಾಖೆಯಲ್ಲಿ ತಾತ್ಕಾಲಿಕವಾಗಿ ವಸತಿ ಹಾಗೂ ಜಿಲ್ಲಾಸ್ಪತ್ರೆಯಿಂದ ಉಚಿತ ಚಿಕಿತ್ಸೆ ನೀಡುವದಾಗಿ ತಿಳಿಸಿ ಆಶ್ರಮಕ್ಕೆ ಕರೆದೊಯ್ದರು. ರಕ್ಷಣೆ ಕಾರ್ಯದಲ್ಲಿ ಸ್ಥಳೀಯ ಉದ್ಯಮಿಗಳಾದ ಮುನೀರ್.ಎಂ.ಯು., ಖಾದರ್, ರಶೀದ್.ಕೆ., ಅಬುಬಕರ್, ರಾಜು, ರಹೀಮ್, ಅಶ್ರಫ್, ನಯನ, ವಿಬಲ್ಸನ್, ಪೋಲೀಸ್ ಸಿಬ್ಬಂದಿ ರಾಜೇಶ್ ಪಾಲ್ಗೊಂಡಿದ್ದರು.