ವೀರಾಜಪೇಟೆ, ಏ. 27: ವೀರಾಜಪೇಟೆಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ವಾಲಿಬಾಲ್‍ನ ಅಂತಿಮ ಪಂದ್ಯಾಟದಲ್ಲಿ ಎರಡನೇ ಬಾರಿಗೆ ಗುಂಡಿಗೆರೆಯ ಸ್ಟಾರ್ ಬಾಯ್ಸ್ ಜಯ ಸಾಧಿಸಿ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಯೇಶನ್ ವತಿಯಿಂದ ಇಲ್ಲಿನ ತಾಲೂಕು ಮೈದಾನದಲ್ಲಿ ಆಯೋಜಿಸಿದ್ದ ಅಂತಿಮ ಪಂದ್ಯವು ಹೊದವಾಡದ ಓಯಸಿಸ್ ತಂಡ ಹಾಗೂ ಸ್ಟಾರ್‍ಬಾಯ್ಸ್ ತಂಡಗಳ ನಡುವೆ ನಡೆಯಿತು. ಹೊದವಾಡ ಓಯಸಿಸ್ ರನ್ನರ್ಸ್ ಪ್ರಶಸ್ತಿ ಪಡೆಯಿತು.
ಸಮಾರೋಪ
ಮುಸ್ಲಿಂ ಕಪ್ ವಾಲಿಬಾಲ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ಶಾಂತಿ ನಗರದ ಶಾಸಕ ಹಾಗೂ ರಾಜ್ಯದ ಅಲ್ಪಸಂಖ್ಯಾತರ ವಿವಿಧ ಸಂಘಟನೆಗಳ ಮುಖಂಡರಾದ ಎನ್. ಹ್ಯಾರೀಶ್ ಮಾತನಾಡಿ ಕ್ರೀಡಾ ಕೂಟಕ್ಕೆ ಜಾತಿ ಧರ್ಮ ವರ್ಗದ ಬೇಧವಿಲ್ಲ. ಭಾರತೀಯರು ತಮ್ಮ ಪ್ರತಿಭೆಯನ್ನು ರಾಷ್ಟ್ರ ಹಾಗೂ ಅಂತರಾಷ್ಟೀಯ ಮಟ್ಟದಲ್ಲಿ ಪ್ರದರ್ಶಿಸಲು ಮುಕ್ತ ಅವಕಾಶವಿದೆ. ಆಟಗಾರರು ಕೇವಲ ಪಂದ್ಯಾಟದಲ್ಲಿ ಶ್ರದ್ಧೆ, ಶಿಸ್ತನ್ನು ಪಾಲಿಸಿದರೆ ಸಾಲದು. ನಿಜ ಜೀವನದಲ್ಲಿಯೂ ಇದನ್ನು ಪಾಲಿಸುವದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕೆಂದರು.
ವೇದಿಕೆಯಲ್ಲಿ ಜನತಾ ದಳದ ರಾಜ್ಯ ಸಮಿತಿಯ ಮನ್ಸೂರ್ ಆಲಿ, ಕಾಂಗ್ರೆಸ್ ಪಕ್ಷದ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ.ಅಬ್ದಲ್ ಸಲಾಂ, ಎಂ.ವೈ.ಆಲಿ, ನಾಸರ್ ಮಕ್ಕಿ ಸೂಫಿ ಅಬ್ದುಲ್ಲಾ, ಪವಾಜ್, ಉಬೈದುಲ್ಲಾ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಪಿ.ಎ.ಹನೀಫ್ ಮಾತನಾಡಿ ಸಂಘಟನೆ ವತಿಯಿಂದ ಹನ್ನೊಂದನೇ ವರ್ಷದ ವಾಲಿಬಾಲ್ ಪಂದ್ಯಾಟವನ್ನು ವ್ಯವಸ್ಥೆಗೊಳಿಸಲಾಗಿದೆ.
ಗ್ರಾಮಾಂತರ ಪ್ರದೇಶದ ಕ್ರೀಡಾ ಪಟುಗಳಿಗೆ ಅವಕಾಶ ನೀಡಬೇಕೆನ್ನುವ ನಿಟ್ಟಿನಲ್ಲಿ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ. ಮುಂದಿನ ವರ್ಷವೂ ಈ ಪಂದ್ಯಾಟ ಮುಂದುವರೆಯಲಿದೆ ಎಂದು ಹೇಳಿದರು.
ಸಂಘಟನೆಯ ಕಾರ್ಯದರ್ಶಿ ಎಂ.ಎಂ.ಇಸ್ಮಾಯಿಲ್ ಸ್ವಾಗತಿಸಿ ನಿರೂಪಿಸಿದರು. ಅತಿಥಿಗಳು ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.