ಗೋಣಿಕೊಪ್ಪಲು, ಏ. 24: ಯರವ ಸಮಾಜದ ಆಶ್ರಯದಲ್ಲಿ ನಡೆದುಕೊಂಡು ಬರುತ್ತಿರುವ ಕ್ರೀಡೊತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ನೀಡಲಾಯಿತು. ತಾಲೂಕಿನ ವಿವಿಧ ಭಾಗಗಳಿಂದ ಯರವ ಸಮುದಾಯದ ಯುವಕ ಯುವತಿಯರು, ಆದಿವಾಸಿಗಳು ಪಾಲ್ಗೊಂಡಿದ್ದರು.ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ 5 ದಿನಗಳ ಕಾಲ ನಡೆಯುವ ಕ್ರೀಡೋತ್ಸವಕ್ಕೆ ಸಮಾಜ ಬಾಂದವರು ಸಾಂಪ್ರದಾಯಿಕವಾಗಿ ಗುರು ಹಿರಿಯರಿಗೆ, ದೇವಾನು ದೇವತೆಗಳಿಗೆ ಮುಂಜಾನೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಿದರು. ಅತಿಥಿಗಳನ್ನು ಯರವ ಸಾಂಪ್ರದಾಯಿಕ ದುಡಿಕೊಟ್ಟಿನ ಮೂಲಕ ಮೈದಾನಕ್ಕೆ ಕರೆತರಲಾಯಿತು. 8ನೇ ವರ್ಷದ ಇಡೆಮಲೆಲಾತ್ಲೇರ ಮನೆತನದ ಹೆಸರಿನಲ್ಲಿ ನಡೆಯುತ್ತಿರುವ ಕ್ರಿಕೆಟ್ ಹಬ್ಬದ ಸವಿನೆ ನಪಿಗಾಗಿ ಮೈದಾನದ ಬದಿಯಲ್ಲಿ ಅತಿಥಿಗಳು ಗಿಡ ನೆಡುವ ಮೂಲಕ ಪರಿಸರ
(ಮೊದಲ ಪುಟದಿಂದ) ಉಳಿಸುವ ನಿಟ್ಟಿನಲ್ಲಿ ಸಂದೇಶ ಸಾರಿದರು. ನಂತರ ವೇದಿಕೆಯಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಆದಿವಾಸಿಗಳು ಒಂದೆಡೆ ಸೇರುವ ಮೂಲಕ ಕ್ರೀಡಾಕೂಟವನ್ನು ಆಯೋಜಿಸುತ್ತಿರು ವದು ಉತ್ತಮ ಬೆಳವಣಿಗೆ ಎಂದರು. 8ನೇ ವರ್ಷದ ಇಡೆಮಲೆಲಾತ್ಲೇರ ಮನೆತನದ ಕ್ರಿಕೆಟ್ ಪಂದ್ಯಾಟಕ್ಕೆ ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಶಿಸುತ್ತಿದ್ದು ಇದನ್ನು ಉಳಿಸುವ ಕೆಲಸವನ್ನು ಸಮಾಜ ಬಾಂದವರು ಮಾಡಬೇಕು. ಮೂಲ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಕ್ರೀಡೆ ಸಹಕಾರಿ. ಯರವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರವಾಗುತ್ತಿರುವದು ಆತಂಕಕಾರಿ ಬೆಳವಣಿಗೆ ಎಂದ ಅವರು ಕಲೆ, ಸಂಸ್ಕøತಿ, ಉಳಿಯಲು ಕ್ರೀಡೆ ಸಹಕಾರಿ ಎಂದರು. ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ ಮಾತನಾಡಿ ಶಿಸ್ತು ಬದ್ದವಾಗಿ ಕ್ರೀಡೆಯನ್ನು ಆಯೋಜಿಸಲಾಗಿದೆ. ವಿದ್ಯಾಭ್ಯಾಸಕ್ಕೆ ಸಮಾಜ ಬಾಂಧವರು ಒತ್ತು ನೀಡಬೇಕು ಎಂದರು.
ಯರವ ಭಾಷೆಯಲ್ಲಿಯೇ ತಮ್ಮ ಅಧ್ಯಕ್ಷೀಯ ಭಾಷಣವನ್ನು ಆರಂಭಿಸಿದ ಯರವ ಸಮಾಜದ ಅಧ್ಯಕ್ಷ ಶಾಂತಕುಮಾರ್,ಇನ್ನು ಮುಂದಿನ ವರ್ಷದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವ ತಂಡಗಳು ನಮ್ಮ ಜಮ್ಮ ಹೆಸರಿನ ಮನೆತನದ ಹೆಸರಿನಲ್ಲಿಯೇ ನೋಂದಾವಣೆ ಮಾಡಿಕೊಂಡು ಜನಾಂಗವನ್ನು ಮುನ್ನಡೆಸಲು ಸಹಕರಿಸಬೇಕು. ಸರ್ಕಾರ ನಮ್ಮನ್ನು ಗುರುತಿಸಿ ಕ್ರೀಡೆಗೆ ಅನುದಾನ ಬಿಡುಗಡೆ ಮಾಡಬೇಕು. ಆರಂಭ ದಿಂದಲೂ ಕೊಡಗಿನ ದಾನಿಗಳು ನೀಡುತ್ತಿರುವ ಸಹಾಯವನ್ನೇ ನಂಬಿಕೊಂಡು ಕ್ರೀಡೆಯನ್ನು ನಡೆಸುತ್ತಿದ್ದೇವೆ. ಜನಾಂಗದ ಒಗ್ಗಟ್ಟಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಶರತ್ ಕಾಂತ್ ಮಾತನಾಡಿದರು. ದಾನಿಗಳಾದ ಮೀನು ಉಂಬಯಿ ಉಪಸ್ಥಿತರಿದ್ದರು. ಯರವ ಸಮಾಜದ ಕಾರ್ಯದರ್ಶಿ ಸಂಜೀವ ಸ್ವಾಗತಿಸಿದರು. ಸಂಚಾಲಕ ಸಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು. ನಿತಿನ್ ವಂದಿಸಿದರು. ಕ್ರೀಡೋತ್ಸವದ ಅಂಗವಾಗಿ ಆದಿವಾಸಿ ಮಹಿಳೆಯರಿಗೆ, ಪುರುಷರಿಗೆ ಏರ್ಪಡಿಸಿದ್ದ ಹಗ್ಗ - ಜಗ್ಗಾಟ, ಬಿಂದಿಗೆಯಲ್ಲಿ ನೀರು ತರುವ ಸ್ಪರ್ಧೆ ಗೋಣಿಚೀಲ ನಡಿಗೆ ಸ್ಪರ್ಧೆಯು ನೋಡುಗರನ್ನು ರಂಜಿಸಿತು.
-ಹೆಚ್.ಕೆ.ಜಗದೀಶ್