ಮಡಿಕೇರಿ, ಏ. 24: ಕರ್ನಾಟಕ ರಾಜ್ಯ ಗೃಹ ಸಚಿವ ಹಾಗೂ ಪ್ರತ್ಯೇಕ ಲಿಂಗಾಯಿತ ಧರ್ಮದ ಪ್ರತಿಪಾದಕರಾಗಿರುವ ಎಂ.ಬಿ. ಪಾಟೀಲ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಶೃತಿಬೆಳ್ಳಕ್ಕಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ‘ಪೋಸ್ಟ್ಕಾರ್ಡ್ ನ್ಯೂಸ್’ ಜಾಲತಾಣದ ಮಹೇಶ್ ವಿಕ್ರಂ ಹೆಗಡೆ ಅವರನ್ನು ಇಂದು ವೀರಾಜಪೇಟೆ ಬಳಿಯ ಪಾಲಂಗಾಲದ ರೆಸಾರ್ಟ್ವೊಂದರಿಂದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.ಉಡುಪಿ ಜಿಲ್ಲೆಯ ಮೂಡಬಿದ್ರೆ ಮೂಲದ ಮಹೇಶ್ ವಿಕ್ರಂ ಹೆಗಡೆ ಇಂದು ಕೊಡಗಿನಲ್ಲಿ ಸ್ನೇಹಿತರ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದು, ಪಾಲಂಗಾಲದ ಪ್ರತಿಷ್ಠಿತ (ಮೊದಲ ಪುಟದಿಂದ) ರೆಸಾರ್ಟ್ನಲ್ಲಿ ನಿನ್ನೆ ರಾತ್ರಿ ತಂಗುವದರೊಂದಿಗೆ ಈ ಬೆಳಿಗ್ಗೆ ಉಪಹಾರ ಸೇವಿಸಿ ಕಾರ್ಯಕ್ರಮಕ್ಕೆ ಹೊರಡಲು ತಯಾರಿಯಲ್ಲಿದ್ದರೆಂದು ಗೊತ್ತಾಗಿದೆ.ಈ ವೇಳೆ ಹಠಾತ್ ಅಲ್ಲಿಗೆ ಧಾವಿಸಿರುವ ಪೊಲೀಸ್ ತಂಡವೊಂದು, ತಾವು ಸೈಬರ್ ಕ್ರೈ ವಿಭಾಗದಿಂದ ಬಂದಿದ್ದು, ಸಾಮಾಜಿಕ ಜಾಲತಾಣ ದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ್ ಮೇಲಿನ ನಿಂದನೆ ಪ್ರಕರಣದ ದೂರು ಸಂಬಂಧ ಕರೆದೊಯ್ಯುತ್ತಿರುವದಾಗಿ ಹೇಳಿರುವರೆಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟದ ಬಗ್ಗೆ ಗೃಹ ಸಚಿವ ಎಂ.ಬಿ. ಪಾಟೀಲ್ ಕುರಿತು; ಮಹೇಶ್ ವಿಕ್ರಂ ಹೆಗಡೆ ಹಾಗೂ ಶೃತಿ ಬೆಳ್ಳಕ್ಕಿ ಎಂಬಿಬ್ಬರು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವ ಸಂಬಂಧ ಬಂಧಿಸಿ ವಿಚಾರಣೆ ನಡೆಸುತ್ತಿರುವದಾಗಿ ಹೇಳಲಾಗುತ್ತಿದೆ. ಇವರಿಬ್ಬರ ಬಂಧನ ವಿರುದ್ಧ ಉಭಯ ಕುಟುಂಬಸ್ಥರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತಗೊಂಡಿದೆ.
ಆದರೆ ಜಿಲ್ಲೆಯಲ್ಲಿ ಹೆಗಡೆ ಬಂಧನ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಲ್ಲಿನ ಪೊಲೀಸರು ನಿರಾಕರಿಸಿದ್ದಾರೆ. ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ. ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಹಲವು ಸುಳ್ಳು ಸುದ್ಧಿ ಪ್ರಚಾರ ಸಂಬಂಧ ಪೊಲೀಸ್ ದೂರುಗಳು ದಾಖಲಾಗಿರುವದು ರಾಜಧಾನಿ ಬೆಂಗಳೂರುವಿನ ವಿವಿಧ ಠಾಣೆಗಳಲ್ಲಿ ದೃಢಪಟ್ಟಿದೆ.