ಕೂಡಿಗೆ, ಏ. 24 : 2019-20ನೇ ಸಾಲಿನ ಕ್ರೀಡಾ ಶಾಲೆ ಮತ್ತು ನಿಲಯ ಪ್ರವೇಶಕ್ಕೆ ಹಿರಿಯ ವಿದ್ಯಾರ್ಥಿಗಳ (ಪದವಿ ಪೂರ್ವ ವಿದ್ಯಾರ್ಥಿಗಳ) ಆಯ್ಕೆಯ ರಾಜ್ಯಮಟ್ಟದ ಪರಿಶೀಲನಾ ತರಬೇತಿ ಶಿಬಿರವು ಕೂಡಿಗೆ ಕ್ರೀಡಾಶಾಲೆಯ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಶಿಬಿರಕ್ಕೆ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿಬೋಪಯ್ಯ ಚಾಲನೆ ನೀಡಿದರು. ಪರಿಶೀಲನಾ ಶಿಬಿರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಆಯ್ಕೆಗೊಂಡು ಅಂತಿಮ ಆಯ್ಕೆ ಪ್ರಕ್ರಿಯೆಗೆ 150 ಕ್ಕೂ ಅಧಿಕ ಪ್ರಥಮ ಪಿಯುಸಿಗೆ ಬಾಲಕ ಬಾಲಕಿಯರು ಭಾಗವಹಿಸಿದ್ದಾರೆ. ರಾಜ್ಯದ ಕ್ರೀಡಾ ಹಾಸ್ಟೆಲ್ ಮತ್ತು ಕ್ರೀಡಾ ಶಾಲೆಗಳಿಗೆ ಈಗಾಗಲೇ ಮೊದಲ ಹಂತದ ತೇರ್ಗಡೆಯಾಗಿ ವಿದ್ಯಾರ್ಥಿಗಳು ಪರಿಶೀಲನಾ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಹಾಕಿ, ಅಥ್ಲೆಟಿಕ್, ಜಿಮ್ನಾಸ್ಟಿಕ್, ಫುÅಟ್ಬಾಲ್, ವಾಲಿಬಾಲ್ ಕ್ರೀಡೆಗಳಿಗೆ ಕ್ರೀಡಾ ಹಾಸ್ಟೆಲ್ ಆಯ್ಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಕೂಡಿಗೆ ಕ್ರೀಡಾ ಶಾಲೆಯಿಂದ ಸಮೀಪದ ಕುಶಾಲನಗರ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಿಗೆ ತೆರಳುವ ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಈ ಶಾಲೆಯಲ್ಲಿ ವಿದ್ಯಾರ್ಥಿ ನಿಲಯದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ 25 ಕ್ರೀಡಾ ತರಬೇತಿದಾರರು ಪರಿಶೀಲನಾ ಶಿಬಿರದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ ಎಂದು ಶಿಬಿರದ ಉಸ್ತುವಾರಿ ಅಧಿಕಾರಿ ಡಾ. ವಸಂತ್‍ಕುಮಾರ್ ಮಾಹಿತಿ ನೀಡಿದ್ದಾರೆ.