ಕೂಡಿಗೆ, ಏ. 24: ಕೋಟಿ ರೂಪಾಯಿ ವ್ಯಯಿಸಿದ್ದರೂ, ಕುಶಾಲನಗರ ಸುತ್ತಮುತ್ತಲಿನ ಗ್ರಾಮೀಣ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕಾವೇರಿ ನದಿಯ ಒಡಲು ಬತ್ತುತ್ತಿರುವದು ಈಗಿನ ಸನ್ನಿವೇಶದ ತೊಂದರೆಗೆ ಕಾರಣವಾಗಿದೆ ಎಂದು ನೀರು ಸರಬರಾಜು ಮಂಡಳಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆರು ವರ್ಷಗಳ ಹಿಂದೆ 6 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಿಗೆ ರೂ. 12 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದರೂ, ಎದುರಾಗಿರುವ ನೀರಿನ ಬವಣೆ ಬಗ್ಗೆ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಸಾಧ್ಯವಿರುವ ಮಟ್ಟಿಗೆ ನೀರನ್ನು ತಡೆಗಟ್ಟೆ ಮೂಲಕ ಹೊಳೆಯಿಂದ ಸಂಗ್ರಹಿಸಿ ತಾತ್ಕಾಲಿಕ ಪೂರೈಕೆ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಹೊಳೆ ಬತ್ತುತ್ತಿರುವ ಕಾರಣ ನೀರಿನ ಬವಣೆ ಎದುರಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾವೇರಿ ನದಿಯಿಂದ ಆರು ಗ್ರಾಮ ಪಂಚಾಯ್ತಿ ವ್ಯಾಪ್ತಿಗಳ 12 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ 12 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯು ಪ್ರಾರಂಭಗೊಂಡು ಆರು ವರ್ಷಗಳು ಕಳೆದಿವೆ. ಕಾವೇರಿ ನದಿಯಿಂದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಮೀಪವಿರುವ 2.5 ದಶಲಕ್ಷ ಸಾಮಥ್ರ್ಯದ ಬೃಹತ್ ನೀರಿನ ಟ್ಯಾಂಕ್, ನೀರು ಶುದ್ಧೀಕರಣದ ಘಟಕ, ಪೈಪ್ ಲೈನ್‍ಗಳ ಮೂಲಕ ನದಿಯಿಂದ ನೀರನ್ನು ಟ್ಯಾಂಕಿಗೆ ಸರಬರಾಜು ಮಾಡಿಕೊಂಡು ನಂತರ ಅದೇ ಕೇಂದ್ರದಲ್ಲಿ ಶುದ್ಧೀಕರಣ ಗೊಳಿಸಿ ಆರು ಗ್ರಾಮ ಪಂಚಾಯ್ತಿಯ 12 ಹಳ್ಳಿಗಳ ಟ್ಯಾಂಕ್‍ಗಳಿಗೆ ಸರಬರಾಜು ಮಾಡುವ ಉದ್ದೇಶ ಹೊಂದಿದೆ. ಶುದ್ಧೀಕರಣ ಘಟಕದಲ್ಲಿ ಎರಡೂ ಯಂತ್ರ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಸಿಬ್ಬಂದಿಗಳ ಮತ್ತು ಅಧಿಕಾರಿಗಳ ಹೊಂದಾಣಿಕೆಯ ಸಮಸ್ಯೆಯಿಂದ ಶಿರಂಗಾಲ, ತೊರೆನೂರು, ಕೂಡಿಗೆ, ಕೂಡು ಮಂಗಳೂರು,

(ಮೊದಲ ಪುಟದಿಂದ) ಮುಳ್ಳುಸೋಗೆ ವ್ಯಾಪ್ತಿಗೆ ನೀರು ಸರಬರಾಜು ಸ್ಥಗಿತಗೊಂಡಿದೆ.

ಹೆಬ್ಬಾಲೆಯ ಹೃದಯ ಭಾಗದಲ್ಲಿ ನೀರು ಶುದ್ಧೀಕರಣ ಘಟಕ ಹಾಗೂ ಬೃಹತ್ ನೀರಿನ ಟ್ಯಾಂಕ್ ಅನ್ನು ನಿರ್ಮಾಣಗೊಳಿಸಿ ಆರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 12 ಉಪಗ್ರಾಮಗಳಿಗೆ ನೀರೊದಗಿಸುವ ಈ ಬೃಹತ್ ಯೋಜನೆ ಇದಾಗಿದೆ. 6 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಪ ಗ್ರಾಮಗಳವರೆಗೂ ಒದಗಿಸಬೇಕಾದ ನೀರು ಕಳೆದ ಮೂರು ತಿಂಗಳುಗಳಿಂದ ತೊರೆನೂರು, ಶಿರಂಗಾಲ, ಕೂಡಿಗೆಗೂ ಸರಬರಾಜಾಗುತ್ತಿಲ್ಲ. ಹೆಬ್ಬಾಲೆಯಿಂದ ಮುಳ್ಳುಸೋಗೆ ವರೆಗೆ ನೀರು ಸರಬರಾಜಾಗುವ ಯೋಜನೆಯು ಕಾಮಗಾರಿಯಲ್ಲಿ ಸೇರಿದ್ದರೂ ಇದುವರೆಗೆ ಕೂಡುಮಂಗಳೂರಿನ ಕೂಡ್ಲೂರು ಹಾಗೂ ಮುಳ್ಳುಸೋಗೆ ಗ್ರಾಮ ಪಂಚಾಯ್ತಿವರೆಗೂ ತಲಪಿಲ್ಲ. ಕಳೆದ ಮೂರು ತಿಂಗಳಿನಿಂದ ಶಿರಂಗಾಲ, ತೊರೆನೂರು, ಕೂಡಿಗೆ ವ್ಯಾಪ್ತಿಗೆ ಅಳವಡಿಸಿರುವ ಪೈಪ್‍ಗಳು ಒಡೆದುಹೋಗಿದ್ದು, ಅವುಗಳನ್ನು ಸರಿಪಡಿಸಲು ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಯಾವದೇ ರೀತಿಯ ಗಮನ ಹರಿಸಿಲ್ಲ.

ಶಿರಂಗಾಲದಿಂದ ಮುಳ್ಳುಸೋಗೆ ಗ್ರಾಮ ಪಂಚಾಯ್ತಿವರೆಗೆ ಬೃಹತ್ ಪೈಪ್‍ಗಳನ್ನು ಅಳವಡಿಸಿ ಅವುಗಳ ಮೂಲಕ ನೀರನ್ನು ಹರಿಸಲು ಹೆಬ್ಬಾಲೆಯಿಂದ ಬಂದ ನೀರನ್ನು ಆಯಾ ಗ್ರಾಮ ಪಂಚಾಯ್ತಿಗಳಲ್ಲಿ ತಾಲ್ಲೂಕು ಪಂಚಾಯ್ತಿ ಅನುದಾನದಲ್ಲಿ ನಿರ್ಮಿಸಿಕೊಂಡಿರುವ ಟ್ಯಾಂಕ್‍ಗಳಿಗೆ ನೀರನ್ನು ತುಂಬಿಸಿ ನಂತರ ಉಪ ಪೈಪ್‍ಗಳ ಮೂಲಕ ಎಲ್ಲಾ ಗ್ರಾಮದ ಬೀದಿಗಳಿಗೆ ನೀರೋದಗಿಸುವ ಯೋಜನೆ ಇದಾಗಿದೆ. ಆದರೆ, ಇದೀಗ ಹೆಬ್ಬಾಲೆ ಗ್ರಾಮದ ನಾಲ್ಕು ವಾರ್ಡುಗಳಿಗೆ ಮಾತ್ರ ನೀರನ್ನು ಒದಗಿಸಲಾಗುತ್ತಿದೆ ಹೊರತು, ಬೇರ್ಯಾವ ಗ್ರಾಮಗಳಿಗೂ ನೀರನ್ನು ಒದಗಿಸುತ್ತಿಲ್ಲ. ಇದೀಗ ಕಾವೇರಿ ನದಿಯಲ್ಲಿಯೂ ನೀರಿನ ಪ್ರಮಾಣ ತೀರಾ ಕಡಿಮೆಯಾದ ಹಿನ್ನೆಲೆಯಲ್ಲಿ ನದಿಗೆ ಅಳವಡಿಸಿರುವ ಬೃಹತ್ ನೀರೆತ್ತುವ ಯಂತ್ರದ ಕೊಠಡಿಯೊಳಗೆ ಪ್ರಕೃತಿ ವಿಕೋಪದ ಸಂದರ್ಭ ಭಾರೀ ನೀರು ಹರಿದ ಪರಿಣಾಮ ಮರಳು, ಮಣ್ಣು ತುಂಬಿರುವ ಹಿನ್ನೆಲೆಯಲ್ಲಿ ನೀರೆತ್ತುವ ಯಂತ್ರವು ಭಾರೀ ಕಡಿಮೆ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸುತ್ತಿದೆ. ಇದೀಗ ಜಲಮಂಡಳಿಯವರ ದೂರಿನನ್ವಯ ತಾಲ್ಲೂಕು ಕುಡಿಯುವ ನೀರು ಸರಬರಾಜು ಯೋಜನೆಯ ವತಿಯಿಂದ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಕೋಟಿಗಟ್ಟಲೆ ಸರಕಾರದ ಹಣವನ್ನು ವಿನಿಯೋಗಿಸಿ ಕುಡಿಯುವ ನೀರನ್ನು ಒದಗಿಸುತ್ತೇವೆ ಎಂದು ಬೃಹತ್ ಯೋಜನೆಯನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತಂದು ಇದುವರೆಗೂ ನೀರು ಮಾತ್ರ ನಾಲ್ಕು ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಿಗೆ ತಲಪಿಲ್ಲ. ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಇಲಾಖೆಯಿಂದ ಸರಬರಾಜು ವ್ಯವಸ್ಥೆಯ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯ್ತಿ ಗ್ರಾಮಾಂತರ ಕುಡಿಯುವ ನೀರಿನ ಸರಬರಾಜು ಮಂಡಳಿ ವಹಿಸಿಕೊಂಡಿದೆ. ಆದರೆ, ಕುಡಿಯುವ ನೀರು ಮಾತ್ರ ಗ್ರಾಮಗಳಿಗೆ ತಲಪಿಲ್ಲ. ಹಣ ಮಾತ್ರ ಗುತ್ತಿಗೆದಾರನ ಕೈಸೇರಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೂಡ್ಲೂರು ಮತ್ತು ಮುಳ್ಳುಸೋಗೆ ಗ್ರಾ.ಪಂ ಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಹೆಬ್ಬಾಲೆಯಲ್ಲಿ ಈ ಬೃಹತ್ ಯೋಜನೆಯ ಕುಡಿಯುವ ನೀರು ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯ ನೀರಿನ ಟ್ಯಾಂಕ್‍ಗೆ ನೀರು ಬಂದಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ, ಹೆಬ್ಬಾಲೆಯಿಂದ ಮುಳ್ಳುಸೋಗೆವರೆಗೆ ಹೆಸರಿಗೆ ಮಾತ್ರ ಪೈಪ್ ಲೈನ್ ಅಳವಡಿಸಿದ್ದು, ಇದುವರೆಗೂ ನೀರು ಬರುತ್ತಿಲ್ಲ ಎಂಬದು ಮುಳ್ಳುಸೋಗೆ ವ್ಯಾಪ್ತಿಯ ನಿವಾಸಿಗಳ ಆರೋಪ.

ಜಿಲ್ಲಾ ಪಂಚಾಯ್ತಿ ಬೃಹತ್ ನೀರಿನ ಯೋಜನೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವದರಿಂದ ನೀರಿಗೆ ಹಾಹಾಕಾರ ಬಂದೊದಗಿರುವ ಇಂತಹ ಸಂದರ್ಭದಲ್ಲಿ ಇದರತ್ತ ಗಮನಹರಿಸಿ ತುರ್ತಾಗಿ ಕ್ರಮಕೈಗೊಳ್ಳಬೇಕೆಂಬದು ಈ ವ್ಯಾಪ್ತಿಯ ಸಾರ್ವಜನಿಕರ ಆಗ್ರಹವಾಗಿದೆ.

ದೂರವಾಣಿ ಮೂಲಕ ಸಂಬಂಧಪಟ್ಟ ಇಂಜಿನಿಯರ್ ಅವರನ್ನು ಸಂಪರ್ಕಿಸಿದಾಗ ಈಗಾಗಲೇ ಜಾಕ್ವೇಲ್ (ನೀರೆತ್ತುವ ಯಂತ್ರ) ಸಮೀಪ ಹೂಳು ತುಂಬಿರುವದರಿಂದ ಗುತ್ತಿಗೆದಾರರಿಗೆ ಟೆಂಡರ್ ನೀಡಿ ಹೂಳು ತೆಗೆಸಲಾಗುತ್ತಿದೆ. ನಂತರ ಜಾಕ್ವೇಲ್‍ನಿಂದ ಹೆಚ್ಚು ನೀರನ್ನು ಎತ್ತುವ ಮೂಲಕ ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡಿ, ಘಟಕದಲ್ಲಿ ನೀರನ್ನು ಶುದ್ಧೀಕರಿಸಿ, ಎಲ್ಲಾ ಗ್ರಾಮಗಳಿಗೆ ನೀರು ಒದಗಿಸಲಾಗುವದು. ಈಗಾಗಲೇ ತೊರೆನೂರು ಮತ್ತು ಕೂಡಿಗೆ ಕಡೆಗೆ ಹೋಗುವ ಬೃಹತ್ ಪೈಪುಗಳು ಒಡೆದುಹೋಗಿದ್ದು, ದುರಸ್ತಿ ಕಾರ್ಯಕ್ಕೆ ಕಾರ್ಯೋನ್ಮುಖರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ