ವೀರಾಜಪೇಟೆ, ಏ. 24: ನಿನ್ನೆ ದಿನ ಸಂಜೆ 6-30ರಿಂದ ರಾತ್ರಿ 8 ಗಂಟೆಯವರೆಗೆ ಭಾರೀ ಗುಡುಗು ಮಿಂಚು ಸಹಿತ ಮಳೆ ಸುರಿದಿದ್ದು ವೀರಾಜಪೇಟೆ ವಿಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ರಾತ್ರಿಯಿಂದ ಬೆಳಗಿನ ತನಕ ಕಾರ್ಗತ್ತಲು ಆವರಿಸಿತ್ತು. ಕೇವಲ ಒಂದೂವರೆ ಗಂಟೆಯ ಅವಧಿಯಲ್ಲಿ 1.7 ಇಂಚುಗಳಷ್ಟು ಮಳೆ ಸುರಿಯಿತು.
ಇಲ್ಲಿನ ಸುಂಕದಕಟ್ಟೆ ಬಳಿ ಮಳೆಗೆ ಕಳೆದ ಆಗಸ್ಟ್ ತಿಂಗಳಲ್ಲಿ ಕುಸಿದಿದ್ದ ಮಣ್ಣಿನ ಬರೆ ಮತ್ತೆ ಕುಸಿಯಲು ಪ್ರಾರಂಭಿಸಿದೆ. ವೀರಾಜಪೇಟೆ ಅರಸು ನಗರ, ಮಲೆತಿರಿಕೆಬೆಟ್ಟ, ನೆಹರೂನಗರಗಳಲ್ಲಿ ಸಣ್ಣಪುಟ್ಟ ಮರಗಳು ಮಳೆ ಗಾಳಿಗೆ ಬಿದ್ದಿದ್ದರೂ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ, ಈ ಸಂಬಂಧ ಯಾವದೇ ದೂರು ಬಂದಿಲ್ಲ. ಇಪ್ಪತ್ತು ದಿನಗಳ ಹಿಂದೆ ನೆಹರೂನಗರದ ಏಳನೆ ಬ್ಲಾಕ್‍ನಲ್ಲಿ ಭಾರೀ ತಡೆಗೋಡೆ ಕುಸಿದು ಮೂರು ಮನೆಗಳಿಗೆ ಜಖಂ ಉಂಟಾಗಿರುವ ಕುರಿತು ಕೊಡಗು ಜಿಲ್ಲಾಧಿಕಾರಿ ಅವರಿಗೆ ವರದಿ ಕಳುಹಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಾಡ್ ತಿಳಿಸಿದ್ದಾರೆ.