ಸೋಮವಾರಪೇಟೆ, ಏ. 21: ಸಮಾಜದ ಸುಧಾರಣೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಛಲವಾದಿ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ. ರಾಜು ಅಭಿಪ್ರಾಯಿಸಿದರು.

ಇಲ್ಲಿನ ವೆಂಕಟೇಶ್ವರ ಬ್ಲಾಕ್‍ನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶ ಕಂಡ ಅತ್ಯಂತ ಶ್ರೇಷ್ಠರಲ್ಲಿ ಡಾ. ಅಂಬೇಡ್ಕರ್ ಕೂಡ ಒಬ್ಬರಾಗಿದ್ದಾರೆ. ಅಂದು ಸಮಾಜದಲ್ಲಿ ತುಳಿತಕ್ಕೊಳಗಾಗಿದ್ದ ಹಿಂದುಳಿದ ಜನರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿ, ಅವರಿಗೆ ನ್ಯಾಯ ದೊರಿಕಿಸಿಕೊಟ್ಟಿದ್ದರು. ಪ್ರಪಂಚದ ಅತ್ಯುತ್ತಮ ಸಂವಿಧಾನ ನೀಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಂಬೇಡ್ಕರ್ ಕಂಡ ಸಮಾಜವನ್ನು ನಿರ್ಮಾಣ ಮಾಡಬೇಕೆಂದರು.

ವೇದಿಕೆಯಲ್ಲಿ ದಲಿತ ಸಂಘಟನೆಗಳ ಭೀಮವಾದ ಜಿಲ್ಲಾಧ್ಯಕ್ಷ ರಾಮ್‍ಕುಮಾರ್, ಉಪಾಧ್ಯಕ್ಷ ಎಸ್.ಕೆ. ಸ್ವಾಮಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ, ತಾಲೂಕು ಘಟಕದ ಅಧ್ಯಕ್ಷೆ ವೀಣಾ, ಹೋಬಳಿ ಘಟಕದ ಅಧ್ಯಕ್ಷೆ ಮಣಿ, ಪ್ರಮುಖರಾದ ಹನುಮಯ್ಯ, ಹೊನ್ನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಪ್ರಮುಖರು ಮಾಲಾರ್ಪಣೆ ಮಾಡಿದರು.