ಮಡಿಕೇರಿ, ಏ. 21: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಧಾರ್ಮಿಕ ಪೂಜೆಗಳೊಂದಿಗೆ ಉತ್ಸವಗಳು ನಡೆಯುತ್ತಿದೆ. ಈ ಸಂಬಂಧ ವಿಶೇಷ ಪೂಜಾ ಕೈಂಕರ್ಯ, ಅನ್ನದಾನ ಇತ್ಯಾದಿ ಏರ್ಪಡಿಸಲಾಗಿದೆ.
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ಮೂರು ದಿನಗಳ ಕಾಲ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮಗಳ ಸಾವಿರಾರು ಮಂದಿ ಭಾಗವಹಿಸಿದ್ದರು.
ಗ್ರಾಮದಲ್ಲಿ ವಾಸವಿರುವ ಪ್ರತಿಯೊಬ್ಬರು ಒಂದು ಏಕರೆ ಜಾಗವಿರುವವರು 10 ಸಾವಿರ ಹಣ ನೀಡುವಂತೆ ತೀರ್ಮಾನಿಸಿ ಏಕರೆವಾರು ರೀತಿಯಲ್ಲಿ ಹಣ ಸಂಗ್ರಹಿಸಿ ಸುಮಾರು ರೂ. 30 ರಿಂದ 40 ಲಕ್ಷ ಹಣದಲ್ಲಿ ಸುಂದರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಉಗ್ರಾಣಿ ಮನೋಜ್, ಕಾರ್ಯದರ್ಶಿಯಾಗಿ ರಮೇಶ್ ನೇತೃತ್ವದಲ್ಲಿ ಮೂರು ದಿನದ ಈ ಜಾತ್ರಾ ಮಹೋತ್ಸವದಲ್ಲಿ ಇಡೀ ಗ್ರಾಮವನ್ನೆ ಶೃಂಗಾರ ಮಾಡಲಾಗಿತ್ತು. ದೇವರಿಗೆ ಮಹಾಪೂಜೆ ಮತ್ತು ಪ್ರಸಾದ ವಿತರಿಸಲಾಯಿತು.
ತಾ. 19 ರಂದು ಬೆಳಿಗ್ಗೆ 7 ಗಂಟೆಗೆ ಉಷಾಪೂಜೆ ಗಣಪತಿ ಹೋಮ, ನವಕ ಕಲಶಾಭಿಷೇಕ ನಡೆಯಿತು. ಬೆಳಿಗ್ಗೆ 10 ಗಂಟೆಯಿಂದ ಪುಷ್ಪಾರ್ಚನೆ, ದೀಪ ಪೂಜೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯಿತು. 1 ಗಂಟೆಯಿಂದ ಅನ್ನಸಂತರ್ಪಣೆ ನಡೆಸಲಾಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಂಜೆ 6 ಗಂಟೆಯಿಂದ ತಾಯಂಭಕ, ದೀಪಾರಾಧನೆ, ಶ್ರೀ ದೇವರ ಬಲಿ, ಶ್ರೀ ಭೂತ ಬಲಿ, ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ದೇವರ ಭೇಟಿ ನಡೆಯಿತು. ತಾ. 20 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ಮಹಾಪೂಜೆ, ನಂತರ ಅನ್ನಸಂತರ್ಪಣೆ ನಡೆಸಲಾಯಿತು. ಶಿವಪಂಚಾಕ್ಷರಿ ಹೋಮ ಬಸ್ಮಾರ್ಚನೆ, ಶಿವಪೂಜೆ, ಬಿಲ್ವಾರ್ಚನೆ, ರುದ್ರಾಭಿಷೇಕ ಪೂಜೆಗಳು ನಡೆದವು.
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದ ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕೋತ್ಸವ ತಾ. 19 ರಿಂದ ತಾ. 21 ರವರೆಗೆ ನಡೆಯಿತು. ಕಗ್ಗೋಡ್ಲುವಿನ ರಾಮಚಂದ್ರ ಭಟ್ ಅವರ ನೆತೃತ್ವದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಿತು.
ಎರಡು ದಿನಗಳಲ್ಲಿ ಶ್ರೀ ಮುತ್ತಪ್ಪ ವೆಳ್ಳಾಟಂ ಮತ್ತು ಕೋಲ ಕಾರ್ಯಕ್ರಮ ನಡೆಯಿತು. ತಾ. 21 ರ ಮುಂಜಾನೆ 5.30 ಗಂಟೆಗೆ ಶ್ರೀ ಮುತ್ತಪ್ಪ ತಿರುವಪ್ಪ ತೆರೆ ಮಹೋತ್ಸವದಲ್ಲಿ ಸಾವಿರಾರು ಮಂದಿ ಮುತ್ತಪ್ಪ ಭಕ್ತರು ಹಾಜರಿದ್ದು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು. ಎರಡು ದಿನಗಳ ಕಾಲ ಅನ್ನಸಂತರ್ಪಣೆ ನಡೆಸಲಾಯಿತು.
ಕಾವೇರಿ ನದಿಯಲ್ಲಿ ಪೂಜೆ ನೆರವೇರಿಸಿ ಕಲಶ ಪೂಜೆ, ಮೆರವಣಿಗೆ ಗಮನ ಸೆಳೆಯಿತು. ದುಬಾರೆ ಸಮೀಪದ ಕಾವೇರಿ ನದಿಯಿಂದ ದೇವಸ್ಥಾನದವರಗೆ ಕಲಶ ಮೆರವಣಿಗೆ ನಡೆಯಿತು.
ನಾಪೋಕ್ಲು: ಪಾಲೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಹಬ್ಬವು ವಿಜೃಂಭಣೆಯಿಂದ ಜರುಗಿತು. ಪೂದಕೋಲದೊಂದಿಗೆ ಆರಂಭಗೊಂಡ ಉತ್ಸವವು ತಾ. 20 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು. ದೊಡ್ಡಹಬ್ಬದಲ್ಲಿ ಅಧಿಕ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಬೆಳಿಗ್ಗೆ ತುಲಾಭಾರ ಸೇವೆ, ನಿತ್ಯಬಲಿ, ಎತ್ತು ಪೊರಾಟ ಜರುಗಿತು. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಪರಾಹ್ನ ಜೋಡು ದೇವರ ನೃತ್ಯ ಬಲಿ ಜರುಗಿತು. ಶನಿವಾರ ಸಂಜೆ ತೆಂಗಿನಕಾಯಿಗೆ ಗುಂಡು ಹೊಡೆಯುವದು, ದೇವರ ದರ್ಶನ, ಪವಿತ್ರ ಕಾವೇರಿ ನದಿಯಲ್ಲಿ ದೇವರ ಮೂರ್ತಿಗಳ ಜಳಕ ನಡೆದು ಮೂರ್ತಿಗಳನ್ನು ಮೆರವಣಿಗೆ ಮುಖಾಂತರ ದೇವಾಲಯಕ್ಕೆ ತರಲಾಯಿತು. ತಕ್ಕÀಮುಖ್ಯಸ್ಥರು, ಸದಸ್ಯರು ಪಾಲ್ಗೊಂಡಿದ್ದು, ಮುಖ್ಯ ಅರ್ಚಕ ದೇವಿಪ್ರಸಾದ್ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಗಳು ಜರುಗಿದವು ತಾ. 20 ರಂದು ರಾತ್ರಿ ವಿವಿಧ ದೇವರ ಕೋಲವು ಜರುಗಿತು. ತಾ. 21 ರಂದು ವಿಷ್ಣುಮೂರ್ತಿ ದೇವರ ಕೋಲ ನೆರವೇರಿತು.
ಸಿದ್ದಾಪುರ: ಸಮೀಪದ ಟೀಕ್ವುಡ್ ಎಸ್ಟೇಟ್ನ ಶ್ರೀ ಚಾಮುಂಡೇಶ್ವರಿ ದೇವಾಯದ ವಾರ್ಷಿಕೋತ್ಸವ ನಡೆಯಿತು. ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಹೋಮ, ಬಿಂಬ ಶುದ್ಧಿ, ಚಂಡಿಕಾಯಾಗ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಮಹಿಳೆಯರಿಗೆ ಬಳೆಗಳನ್ನು ವಿತರಿಸಲಾಯಿತು. ಕೇರಳದ ಚಂಡೆ ವಾದ್ಯ, ಕೊಡಗಿನ ಬ್ಯಾಂಡ್ ಗಮನ ಸೆಳೆಯಿತು. ರಾತ್ರಿ ವಾಣಿ ರಾಜಗೋಪಾಲ್ ಕಲಾಕ್ಷೇತ್ರ ಚೆನೈ ತಂಡದಿಂದ ಭರತನಾಟ್ಯ ಗಮನ ಸೆಳೆಯಿತು. ಉತ್ಸವದಲ್ಲಿ ಪಂಡ್ರಿಮಲೆಯ ಶ್ರೀಲಾ ಶ್ರೀ ಶಕ್ತಿವಡಿವೇಲ್ ಸ್ವಾಮಿಗಳು, ದೇವಾಲಯದ ಪ್ರಮುಖರಾದ ಕಂಬೀರಂಡ ನಂಜಪ್ಪ ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಗುಡ್ಡೆಹೊಸೂರು: ಇಲ್ಲಿನ ಬೋಳ್ಳುರು ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನಗಳ ವಾರ್ಷಿಕ ಮಹಾಪೂಜೆ ತಾ. 22 ಮತ್ತು 23 ರಂದು ನಡೆಯಲಿದೆ. ಎರಡು ದಿನಗಳಲ್ಲೂ ಕಾವೇರಿ ನದಿಯಲ್ಲಿ ಗಂಗಾಪೂಜೆ ನಡೆಸಿ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಗುವದೆಂದು ದೇವಸ್ಥಾನ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಎರಡು ದಿನ ದೇವಸ್ಥಾನದ ವತಿಯಿಂದ ಅನ್ನಸಂತರ್ಪಣೆ ನಡೆಯಲಿದೆ.
ಕೊಡಗರಹಳ್ಳಿ: ಕೊಡಗರಹಳ್ಳಿಯ ಕುಂದುರುಮೊಟ್ಟೆ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾ ವಿಷ್ಣು ಹಾಗೂ ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ 41ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ತಾ. 22 ರಿಂದ 24 ರವರೆಗೆ ನಡೆಯಲಿದೆ ಎಂದು ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.
ತಾ. 22 ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮಗಳು ಆರಂಭ ಗೊಳ್ಳಲಿದ್ದು, ರಾತ್ರಿ ದೀಪರಾಧನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ತಾ. 23 ರಂದು ಕುಂದುರು ಮೊಟ್ಟೆ ಶ್ರಿ ಚಾಮುಂಡೇಶ್ವರಿ ದೇವಿಯ ದರ್ಶನ ಪೂಜೆ ಮತ್ತು ರಾತ್ರಿ ವಿವಿಧ ಕೋಲಗಳು ಕೇರಳದ ಕುರುಮತ್ತೂರ್ ಮಲಯಾನ್ ಕೃಷ್ಣನ್ ಮುಂದಾಳತ್ವದಲ್ಲಿ ನಡೆಯಲಿದೆ. ತಾ. 24 ರಂದು ಬೆಳಿಗ್ಗೆ ಅಜ್ಜಪ್ಪ ಕೋಲ ಮತ್ತು ವಿಷ್ಣು ಮೂರ್ತಿ ಕೋಲದ ಅಗ್ನಿ ಪ್ರವೇಶ ನಡೆಯಲಿದ್ದು, ರಾತ್ರಿ ದೇವಿಗೆ ನೈವೇದ್ಯ ಪೂಜೆಯೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಳ್ಳಲಿದೆ.
ಪೊನ್ನಂಪೇಟೆ: ತೂಚಮಕೇರಿ ಸಮೀಪದ ಕೊಮ್ಮಾಡು ಶ್ರೀ ಮಾರಮ್ಮ ದೇವಿಯ ವಾರ್ಷಿಕ ಉತ್ಸವ ತಾ. 23 ರಿಂದ (ನಾಳೆಯಿಂದ) ಆರಂಭಗೊಂಡು ತಾ. 26 ರವರೆಗೆ ವಿವಿಧ ಪೂಜಾ ವಿಧಿ ವಿಧಾನಗ ಳೊಂದಿಗೆ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.
ವೀರಾಜಪೇಟೆ: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಅಯ್ಯಪ್ಪ ಭಗವತಿ ದೇವರ ವಾರ್ಷಿಕೋತ್ಸವ ತಾ. 24 ರವರೆಗೆ ನಡೆಯಲಿದೆ.
ತಾ. 13 ರಂದು ದೇವರ ಕಟ್ಟು ಬಿದ್ದಿದ್ದು, ತಾ. 20 ರಂದು ಪಟ್ಟಣಿ, ತಾ. 21 ರಂದು ದೊಡ್ಡ ಹಬ್ಬ ದೊಂದಿಗೆ ತಾ. 24 ರಂದು ಶುದ್ಧ ಕಲಶ ನಡೆಯಲಿದೆ. ಹಬ್ಬದ ಎಲ್ಲ ದಿನಗಳಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿ ಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.