ಸೋಮವಾರಪೇಟೆ, ಏ. 21: ಮೈಸೂರಿನ ವೇದ ಮಾತಾ ಗುರುಕುಲ ಹಾಗೂ ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ವತಿಯಿಂದ ತಾಲೂಕಿನ ಪುಷ್ಪಗಿರಿ ಬೆಟ್ಟ ತಟದಲ್ಲಿರುವ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥ ರುದ್ರಾಭಿಷೇಕ ಮತ್ತು ಮಹಾ ರುದ್ರಯಾಗ ಸಂಪನ್ನಗೊಂಡಿತು .ದೇಶಾದ್ಯಂತ ಶಾಂತಿ, ಸಹಬಾಳ್ವೆ, ಸುಭೀಕ್ಷೆ ನೆಲೆಸಲಿ, ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿಗೊಳ್ಳಲಿ ಎಂಬ ಸಂಕಲ್ಪದೊಂದಿಗೆ ಶ್ರೀ ಶಾಂತಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಮೈಸೂರಿನ ವೇದಮಾತಾ ಗುರುಕುಲದ ಸುಮಾರು 60 ಅರ್ಚಕರ ತಂಡದಿಂದ ಪುಷ್ಪಗಿರಿ ಶ್ರೀ ಶಾಂತ ಮಲ್ಲಿಕಾರ್ಜುನ ದೇವಾಲಯದಲ್ಲಿ ನಿನ್ನೆ ರಾತ್ರಿಯಿಂದಲೇ ಭಜನೆಗಳು ನಡೆದಿದ್ದು, ಇಂದು ಬೆಳಗ್ಗೆ ದೇವಾಲಯದಲ್ಲಿ ಗಂಗಾಪೂಜೆಯೊಂದಿಗೆ ಮಹಾರುದ್ರಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಗುರುಕುಲದ ಸಂಸ್ಥಾಪಕ ಡಾ. ಮಂಜುನಾಥ್ ಆರಾಧ್ಯ ಅವರ ನೇತೃತ್ವದಲ್ಲಿ 60ಕ್ಕೂ ಅಧಿಕ ಅರ್ಚಕರು, ಸ್ಥಳೀಯ ಅರ್ಚಕರು ಮಹಾರುದ್ರಯಾಗದಲ್ಲಿ ಭಾಗವಹಿಸಿದ್ದರು. ದೇವಾಲಯ ಸಮಿತಿ ಅಧ್ಯಕ್ಷ ಚಂಗಪ್ಪ, ಕಾರ್ಯದರ್ಶಿ ಡಿ.ಬಿ.ವಿಜಯಕುಮಾರ್, ಜಿಲ್ಲಾ ವೀರಶೈವ ಅರ್ಚಕರ ಸಂಘದ ಕಾರ್ಯದರ್ಶಿ ಕೆ.ಬಿ.ಸೋಮಶೇಖರ ಶಾಸ್ತ್ರಿ, ಸೋಮವಾರಪೇಟೆ ಬಸವೇಶ್ವರ ದೇವಾಲಯದ ಅರ್ಚಕ ಮಿಥುನ್ ಶಾಸ್ತ್ರಿ, ಮೈಸೂರು ವೇದ ಮಾತಾ ಗುರುಕುಲದ ಪದಾಧಿಕಾರಿಗಳು ಸೇರಿದಂತೆ ಪ್ರಮುಖರು, ಭಕ್ತಾದಿಗಳು ಮತ್ತು ಸಾರ್ವಜನಿಕರು ಪೂಜಾ ಕಾರ್ಯದಲ್ಲಿ ಉಪಸ್ಥಿತರಿದ್ದರು.
ಗುರುಕುಲದ ಸಂಸ್ಥಾಪಕ ಡಾ. ಮಂಜುನಾಥ್ ಆರಾಧ್ಯ ಮಾತನಾಡಿ, ಪುಷ್ಪಗಿರಿ ಪ್ರದೇಶ ದೈವೀ ಶಕ್ತಿಹೊಂದಿರುವ ಕ್ಷೇತ್ರವಾಗಿದೆ. ದೇಶದ ಮೇಲೆ ಶತ್ರು ರಾಷ್ಟ್ರಗಳ ಕಾಟ ಹೆಚ್ಚುತ್ತಿದ್ದು, ರಾಜಕೀಯದ ವಿಷಯಗಳಿಗಾಗಿ ದೇಶದೊಳಗಿನ ರಾಜಕಾರಣಿಗಳಲ್ಲಿ ಒಗ್ಗಟ್ಟು ಮಾಯವಾಗುತ್ತಿದೆ. ಈ ನಡುವೆ ದೇಶಕ್ಕೆ ಯಾವದೇ ಸಂಚಕಾರ ಬಾರದಿರಲಿ. ದುಷ್ಟಶಕ್ತಿಗಳೆಲ್ಲವೂ ದೂರವಾಗಿ ದೇಶ ಇನ್ನಷ್ಟು ಬಲಿಷ್ಠಗೊಳ್ಳಲಿ. ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಎಲ್ಲರಿಗೂ ನೆಮ್ಮದಿ ಕರುಣಿಸಲಿ. ವ್ಯಾಪಾರ, ವಹಿವಾಟು, ಮಳೆ ಬೆಳೆಯೊಂದಿಗೆ ಎಲ್ಲರ ಜೀವನವೂ ಸಮೃದ್ಧಗೊಳ್ಳಲಿ ಎಂದು ಮಹಾರುದ್ರಯಾಗದ ಮೂಲಕ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.