ಶನಿವಾರಸಂತೆ, ಏ. 21: ಸಮೀಪದ ಅಂಕನಹಳ್ಳಿಯ ಮನೆಹಳ್ಳಿ ತಪೋವನ ಕ್ಷೇತ್ರದಲ್ಲಿ 3 ದಿನಗಳಿಂದ ನಡೆಯುತ್ತಿರುವ ಶ್ರೀ ಗುರುಸಿದ್ಧ ವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಭಾನುವಾರ ರಥೋತ್ಸವದೊಂದಿಗೆ ಅಂತಿಮ ತೆರೆ ಎಳೆಯಲಾಯಿತು.
ಸಾವಿರಾರು ಭಕ್ತರು ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಬೆಳಿಗ್ಗೆ ಶ್ರೀ ಕ್ಷೇತ್ರ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿ ಕೆಂಡೋತ್ಸವ ಸೇವೆ, ಸ್ವಾಮಿಯವರ ಸಣ್ಣ ಚಂದ್ರಮಂಡಲೋತ್ಸವ ಹಾಗೂ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು.
ಶ್ರೀ ಪ್ರಸನ್ನ ತಪೋವನೇಶ್ವರಿ ದೇವಾಲಯದಲ್ಲಿ ಅಮ್ಮನವರ ಪ್ರೀತ್ಯರ್ಥ ಮುತ್ತೈದೆ ಸೇವೆ ನಡೆಯಿತು. ನಂತರ ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ಗಮನ ಸೆಳೆಯಿತು. ನಂತರ ಭಕ್ತಾದಿಗಳಿಗೆ ದಾಸೋಹ ಸೇವೆ ಏರ್ಪಡಿಸಲಾಗಿತ್ತು.
ಮಧ್ಯಾಹ್ನ ಶ್ರೀ ಸ್ವಾಮಿಯವರ ದೊಡ್ಡ ಚಂದ್ರಮಂಡಲೋತ್ಸವ ನಡೆಯಿತು. ಸಂಜೆ ಶ್ರೀ ಸ್ವಾಮಿಯವರ ಪ್ರಕಾರ ಪಲ್ಲಕ್ಕಿ ಉತ್ಸವದೊಂದಿಗೆ ರಥೋತ್ಸವ ಬಿಜಯಿಂಗೈಯಿತು. ಸ್ವಾಮಿಯವರ ಮಹಾ ರಥೋತ್ಸವ ನಡೆದು ಶ್ರೀ ವೃಷಭಲಿಂಗೇಶ್ವರ ಸ್ವಾಮಿಯವರ ಸನ್ನಿದಾನದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಪ್ರಮುಖರಾದ ಓಂಕಾರ್ ಪಟೇಲ್, ಬಸವರಾಜ್, ಸುರೇಶ್, ಮಂಜು, ಚಂದ್ರಕಾಂತ ಇತರರು ಹಾಜರಿದ್ದರು.