ಸೋಮವಾರಪೇಟೆ, ಏ. 21: ಇಲ್ಲಿಗೆ ಸಮೀಪದ ಮಾದಾಪುರದ ಗರ್ವಾಲೆ ರಸ್ತೆ ತಿರುವಿನಲ್ಲಿ ಪಿಕಪ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಕೊನೆಯುಸಿರೆಳೆದಿದ್ದು, ಹಿಂಬದಿ ಸವಾರ ತೀವ್ರ ಗಾಯಗೊಂಡಿರವ ದುರ್ಘಟನೆ ಇಂದು ಅಪರಾಹ್ನ 3 ಗಂಟೆ ಸುಮಾರಿಗೆ ಸಂಭವಿಸಿದೆ.

ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಯಾಗಿರುವ, ಅಲ್ಲಿನ ಬಿಳಿಗೇರಿ ನಿವಾಸಿ ಕೊಂಬೆಟ್ಟು ಪರಮೇಶ್ವರ ಎಂಬವರ ಪುತ್ರ ಗಗನ್ (19) ಮೃತ ದುರ್ದೈವಿ. ಹಿಂಬದಿ ಸವಾರ ಮೇಕೇರಿ ನಿವಾಸಿ ಪಾಣತ್ತಲೆ ಪೊನ್ನಪ್ಪ ಎಂಬವರ ಮಗ ಪಿ.ಪಿ. ಲೋಹಿತ್ (19) ಮುಖ, ಕೈ, ಕಾಲುಗಳಿಗೆ ತೀವ್ರ ಗಾಯಗೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇಂದು ಬೆಳಿಗ್ಗೆ ಕಾಲೇಜಿನ ಸ್ನೇಹಿತರು ದ್ವಿಚಕ್ರ ವಾಹನಗಳಲ್ಲಿ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಬಂದಿದ್ದು, ಮಧ್ಯಾಹ್ನ ಮಡಿಕೇರಿಯತ್ತ ಹಿಂತೆರಳಿದ್ದಾರೆ. ಈ ಸಂದರ್ಭ ಶಿರಂಗಳ್ಳಿ ಗ್ರಾಮದ ವಿನೋದ್ ಎಂಬಾತ ತನ್ನ ಪಿಕಪ್ ವಾಹನವನ್ನು ಮಾದಾಪುರ ಮುಖ್ಯರಸ್ತೆಯಿಂದ ಗರ್ವಾಲೆಯತ್ತ ತಿರುಗಿಸುವಷ್ಟರಲ್ಲಿ ಬೈಕ್- ಪಿಕಪ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಮಾರಣಾಂತಿಕ ಗಾಯಗೊಂಡ ಬೈಕ್ ಸವಾರನನ್ನು ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸುವಷ್ಟರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗಗನ್ ಕೊನೆಯುಸಿರೆಳೆದಿದ್ದಾನೆ. ಮೃತನ ಶವದೊಂದಿಗೆ ಗಾಯಾಳು ಲೋಹಿತ್‍ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಅಪಘಾತ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪಿಕಪ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡ ಸ್ವಾಮಿ ಹಾಗೂ ಸಿಬ್ಬಂದಿ ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಗನ್ ಓಡಿಸುತ್ತಿದ್ದ ದ್ವಿಚಕ್ರ ವಾಹನವು ಮೃತನ ಸ್ನೇಹಿತ ಮದೆನಾಡುವಿನ ಯು.ಎಂ. ಲಿಖಿತ್ ಎಂಬಾತನಿಗೆ ಸೇರಿದ್ದಾಗಿದ್ದು, ನಾಲ್ಕಾರು ಸ್ನೇಹಿತರು ದ್ವಿಚಕ್ರ ವಾಹನಗಳಲ್ಲಿ ಮಲ್ಲಳ್ಳಿಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ದುರ್ಘಟನೆ ಎದುರಾಗಿದೆ.

ಜಿಲ್ಲಾ ಸರಕಾರಿ ಆಸ್ಪತ್ರೆ ಬಳಿ ಮೃತ ಗಗನ್ ಪೋಷಕರು, ಬಂಧುಗಳ ರೋಧನ ಮನ ಕಲಕುವಂತಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಬಂಧುಗಳಿಗೆ ಒಪ್ಪಿಸ ಲಾಯಿತು. ಕಾಲೇಜು ವಿದ್ಯಾರ್ಥಿ ಸ್ನೇಹಿತರು ಕೂಡ ಅಪಾರ ಸಂಖ್ಯೆಯಲ್ಲಿ ಆತಂಕದೊಂದಿಗೆ ನೆರೆದಿದ್ದ ದೃಶ್ಯ ಎದುರಾಯಿತು.