ಮಡಿಕೇರಿ, ಏ. 20: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕೊಡಗು-ಮೈಸೂರು ಕ್ಷೇತ್ರ ಚುನಾವಣೆ ಪ್ರಥಮ ಹಂತದಲ್ಲೇ ಜರುಗಿದ್ದು, ಮತ ಎಣಿಕೆಗೆ ಇನ್ನೂ ಒಂದು ತಿಂಗಳಿಗೂ ಅಧಿಕ ಸಮಯವಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಳಪಟ್ಟಿರುವ ಎಂಟು ವಿಧಾನಸಭಾ ಕ್ಷೇತ್ರಗಳಾದ ಕೊಡಗಿನ ಮಡಿಕೇರಿ, ವೀರಾಜಪೇಟೆ, ಹುಣಸೂರು, ಪಿರಿಯಾಪಟ್ಟಣ, ಮೈಸೂರು ನಗರ ವ್ಯಾಪ್ತಿಯ ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಮತಯಂತ್ರಗಳನ್ನು ಇದೀಗ ಮೈಸೂರಿನಲ್ಲಿ ಭಾರೀ ಭದ್ರತಾ ವ್ಯವಸ್ಥೆಯೊಂದಿಗೆ ಇರಿಸಲಾಗಿದೆ.ತಾ. 18 ರಂದು ಮತದಾನ ನಡೆದಿದ್ದು, ತಾ. 19ರ ಅಪರಾಹ್ನ ವೇಳೆಗೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಅಭ್ಯರ್ಥಿಗಳ ಕುರಿತಾಗಿ ‘ಮತದಾರ ಪ್ರಭು’ ನೀಡಿರುವ ತೀರ್ಪನ್ನು ಒಳಗೊಂಡಿರುವ ಮತಯಂತ್ರಗಳು ಇದೀಗ ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಕಾಮರ್ಸ್ ಕಾಲೇಜು ಆವರಣದಲ್ಲಿ ಭದ್ರವಾಗಿವೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಮತೆ ಎಣÉಕೆ ಪ್ರಕ್ರಿಯೆಯೂ ಈ ಹೊಸ ಕಟ್ಟಡದ ಆವರಣದಲ್ಲಿ ನಡೆದಿದ್ದು, ಇದೀಗ ಲೋಕಸಭಾ ಚುನಾವಣೆಯ ಮತ ಎಣಿಕೆಯನ್ನು ಇದೇ ಆವರಣದಲ್ಲಿ ನಡೆಸಲಾಗುವದು ಎಂದು ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ತಿಳಿಸಿದ್ದಾರೆ.

24x7 ರಂತೆ ಭಾರೀ ಭದ್ರತೆ :ಮತ ಎಣಿಕೆಗೆ ಸಾಕಷ್ಟು ಸಮಯಾವಕಾಶವಿರುವ ಹಿನ್ನೆಲೆಯಲ್ಲಿ 24x7 ರಂತೆ ಮತಯಂತ್ರಗಳನ್ನು ಭಾರೀ ರಕ್ಷಣೆಯಲ್ಲಿಸುಭದ್ರವಾಗಿರಿಸಲಾಗಿದೆ. ಈ ಕುರಿತ ವಿವರವನ್ನು ಅಭಿರಾಮ್ ಜಿ. ಶಂಕರ್ ಅವರು ‘ಶಕ್ತಿ’ಗೆ ನೀಡಿದರು.ಮೂರು ಸುತ್ತಿನ ಕಾವಲು: ಮತಯಂತ್ರಗಳನ್ನು ಮೂರು ಹಂತದ ಭದ್ರತೆಯ ನಡುವೆ ಇರಿಸಲಾಗಿದೆ. ಮತಯಂತ್ರಗಳಿರುವ ಸ್ಥಳದ ಒಳಭಾಗದಲ್ಲಿ ಸಿಆರ್‍ಪಿಎಫ್‍ನ ಸಿಬ್ಬಂದಿಗಳು ರಕ್ಷಣಾ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ. ಸೀಲು ಮಾಡಿದ ಮತಯಂತ್ರಗಳನ್ನು ಸಿಆರ್‍ಪಿಎಫ್ ನವರ ಅಧೀನಕ್ಕೆ ವಹಿ¸ Àಲಾಗಿದ್ದು, ಇವರ ಅನುಮತಿಯಿಲ್ಲದೆ ಯಾರೂ ಒಳ ಪ್ರವೇಶಿಸುವಂತಿಲ್ಲ. ಸ್ವತಃ ಚುನಾವಣಾಧಿಕಾರಿ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಕೂಡ ಗುರುತಿನ ಚೀಟಿ ತೋರಿ ಪ್ರವೇಶಿಸಬೇಕಾಗುತ್ತದೆ. ಸಿಆರ್‍ಪಿಎಫ್ ರಕ್ಷಣೆಯ ನಂತರದಲ್ಲಿ ಸಶಸ್ತ್ರಧಾರಿ ಪೊಲೀಸರ ರಕ್ಷಣಾ ಬೇಲಿ ವ್ಯವಸ್ಥೆ ಇರಲಿದ್ದು, ಮೂವರು ಎಸಿಪಿಗಳ ನೇತೃತ್ವದಲ್ಲಿ ಇವುಗಳನ್ನು ದಿನದ 24 ಗಂಟೆಯೂ ಕಾಯಲಾಗುತ್ತದೆ. ಇವರೊಂದಿಗೆ ಓರ್ವ ಗೆಜೆಟೆಡ್ ಅಧಿಕಾರಿ ಕೂಡ ದಿನದ 24 ಗಂಟೆ ಉಸ್ತುವಾರಿಯಲ್ಲಿರುತ್ತಾರೆ.

ಅಭ್ಯರ್ಥಿಗಳಿಗೂ ಅವಕಾಶ ನಿರ್ಬಂಧ : ಮತಯಂತ್ರಗಳನ್ನು ಇರಿಸಿರುವ ಸ್ಥಳವನ್ನು ಯಾವದೇ ಅನುಮಾನಗಳಿದ್ದಲ್ಲಿ ಅಭ್ಯರ್ಥಿಗಳು ಅಥವಾ ಅವರ ಅಧಿಕೃತ ಏಜೆಂಟರು ವೀಕ್ಷಣೆ ಮಾಡಬಹುದಾದರೂ ಇದಕ್ಕೆ ಸಿಆರ್‍ಪಿಎಫ್‍ನ ಅನುಮತಿ ಕಡ್ಡಾಯವಾಗಿದೆ. ನಿನ್ನೆ ಮತಯಂತ್ರಗಳನ್ನು ಭದ್ರಪಡಿಸಿದ ಸಂದರ್ಭ 10 ಅಭ್ಯರ್ಥಿಗಳು ಹಾಗೂ ಇತರ ಅಭ್ಯರ್ಥಿಗಳ ಪರ ಅವರ ಏಜೆಂಟರು ಹಾಜರಿದ್ದು, ಖಾತರಿಪಡಿಸಿಕೊಂಡಿದ್ದಾರೆ.

44 ಸಿಸಿ ಟಿವಿ: ಈ ವ್ಯಾಪ್ತಿಯಲ್ಲಿ 44 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಮತ ಎಣಿಕೆ ತನಕವೂ ಈ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ನಡೆಯುವ ಮೇ 23ರ ತನಕವೂ 24x7 ರಂತೆ ಈ ಭದ್ರತಾ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಲ್ಲಿರುವದಾಗಿ ಅಭಿರಾಮ್ ಜಿ. ಶಂಕರ್ ಅವರು ತಿಳಿಸಿದರು.