ಮಡಿಕೇರಿ, ಏ. 20: ಕಳೆದ ವರ್ಷ ಮಳೆಗಾಲದಲ್ಲಿ ಕೊಡಗು ಕಂಡರಿಯದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದಾಗ; ನೊಂದವರ ಕಣ್ಣೀರು ಒರೆಸುವದರೊಂದಿಗೆ ತುರ್ತಾಗಿ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಕೊಡಿಸುವಲ್ಲಿ ಸೇವಾ ಭಾರತಿ ಪ್ರಕಲ್ಪದಿಂದ ನೆರವಾಗಿದ್ದು, ಯಾವದೇ ಕಷ್ಟದಲ್ಲಿ ಸಮಾಜದೊಂದಿಗೆ ಸದಾ ಕೈಜೋಡಿಸುವದಾಗಿ ಭರವಸೆ ಲಭಿಸಿದೆ. ಕಳೆದ ವರ್ಷ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಕುಟುಂಬಗಳೊಂದಿಗೆ ‘ಸ್ನೇಹ ಮಿಲನ’ ಆಯೋಜಿಸಿದ ಸಂದರ್ಭ ಜನತೆಯನ್ನುದ್ದೇಶಿಸಿ, ಆರೆಸ್ಸೆಸ್ ಕ್ಷೇತ್ರೀಯ ಪ್ರಮುಖ್ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಈ ಭರವಸೆಯ ಮಾತನಾಡಿದರು.(ಮೊದಲ ಪುಟದಿಂದ) ಇಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಮಿತಿಯಿಂದ ಸಂತ್ರಸ್ತ ಕುಟುಂಬಗಳ 37 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ತಮ್ಮ ಕಾಲೇಜಿನಲ್ಲಿ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಕಳೆದ ಐದು ದಶಕಗಳಿಂದ ವಿವೇಕಾನಂದ ಕಾಲೇಜಿನಲ್ಲಿ ಕೊಡಗಿನ ಅನೇಕರು ಶಿಕ್ಷಣ ಪಡೆಯುತ್ತಾ ಬಂದಿದ್ದು, ಪ್ರಸಕ್ತ ಸಾಲಿನಲ್ಲಿ ಕೂಡ ವಿದ್ಯಾರ್ಥಿಗಳ ಶಿಕ್ಷಣ ಮುಂದುವರೆಸಲಾಗುವದು ಎಂದರು.
ಕತ್ತಲೆಯ ನಡುವೆ ಸೇವೆ: ಕೊಡಗಿನಲ್ಲಿ ಪ್ರಕೃತಿಯ ಮುನಿಸು ಅನೇಕರ ಬದುಕಿನಲ್ಲಿ ಕತ್ತಲೆ ತಂದೊಡ್ಡಿ ಮನೆ, ಮಠ, ಆಸ್ತಿ ಎಲ್ಲಾ ಕಳೆದುಕೊಳ್ಳುವಂತೆ ಮಾಡಿದಾಗ ಸೇವಾ ಭಾರತಿ ಮುಖಾಂತರ ಸ್ವಯಂ ಸೇವಕರು ತುರ್ತು ಸೇವೆಗೆ ಧಾವಿಸಿದ್ದನ್ನು ಬೊಟ್ಟು ಮಾಡಿದ ಅವರು, ಕಳೆದ 93 ವರ್ಷಗಳಿಂದ ಆರೆಸ್ಸೆಸ್ ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡೇ ಬಂದಿರುವದಾಗಿ ನುಡಿದರು.
ದೇಶದ ಯಾವದೇ ಪ್ರದೇಶದಲ್ಲಿ ಅತಿವೃಷ್ಟಿ ಅಥವಾ ಅನಾವೃಷ್ಟಿ ಸೇರಿದಂತೆ ಎಲ್ಲಾ ವಿಪತ್ತುಗಳ ಸಂದರ್ಭ ಸಂಘದ ಸ್ವಯಂ ಸೇವಕರು ಮೊದಲು ಧಾವಿಸಿ ಸೇವಾ ನಿರತರಾಗುತ್ತಾರೆ; ಕೆಲವು ವರ್ಷದ ಹಿಂದೆ ರಾಜಸ್ತಾನದಲ್ಲಿ 2 ವಿಮಾನ ದುರಂತ ಸಂಭವಿಸಿದಾಗ, ತಕ್ಷಣ ಕಾರ್ಯನಿರ್ವಹಿಸಿದ್ದ ಸ್ವಯಂ ಸೇವಕರ ಬಗ್ಗೆ ಅಂದಿನ ವಿಮಾನಯಾನ ಸಚಿವರಾಗಿದ್ದ ಸಿ.ಎಂ. ಇಬ್ರಾಹಿಂ ಪ್ರಶಂಸಿಸಿದ್ದನ್ನು ನೆನಪಿಸಿದರು.
ಸೇವಾ ಭಾರತಿಯಿಂದ ವಿದ್ಯಾರ್ಥಿಗಳಿಗೆ 30 ಲಕ್ಷ ರೂಪಾಯಿಯಷ್ಟು ಶೈಕ್ಷಣಿಕ ನೆರವು ಕಲ್ಪಿಸಲಾಗಿದೆ ಎಂದು ಜಿಲ್ಲಾ ಪ್ರಮುಖ ಟಿ.ಸಿ. ಚಂದ್ರನ್ ತಿಳಿಸಿದರು. ಪ್ರಾಕೃತಿಕ ವಿಪತ್ತು ಸಂದರ್ಭ ಪರಿಸ್ಥಿತಿ ಬಗ್ಗೆ ಕೆ.ಕೆ. ಮಹೇಶ್ ಕುಮಾರ್ ಹಾಗೂ ಪ್ರಭಾಕರ್ ನೆನಪಿಸಿದರು. ಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಕಾಲೇಜಿನ ಕೃಷ್ಣಭಟ್, ಆರೆಸ್ಸೆಸ್ ಪ್ರಮುಖರಾದ ಎಂ.ಸಿ. ಕಾರ್ಯಪ್ಪ, ನಾ.ಸೀತಾರಾಂ, ಗಣಪತಿ ಹೆಗಡೆ ಮೊದಲಾದವರಿದ್ದು, ಶಿವಾಜಿ ವಂದಿಸಿದರು.