ಭಾಗಮಂಡಲ, ಏ. 20: ಮೊಬೈಲ್ ಮತ್ತು ದುಶ್ಚಟಗಳಿಗೆ ಬಲಿಯಾಗಿ ಯುವಜನಾಂಗ ಕ್ರೀಡೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದೆ. ಮಾದಕ ವ್ಯಸನಕ್ಕೆ ಬಲಿಯಾದರೆ ಕ್ರೀಡೆಯಲ್ಲಿ ದೈಹಿಕ ಸಾಮಥ್ರ್ಯ ಕುಗ್ಗಲಿದೆ ಎಂದು ಮಾಜಿ ಸೈನಿಕ ತೆಕ್ಕಡೆ ಮಾದಪ್ಪ ಹೇಳಿದರು. ಕೆದಂಬಾಡಿ ಕ್ರಿಕೆಟ್ ಕ್ಲಬ್ ಮತ್ತು ಕೆದಂಬಾಡಿ ಕುಟುಂಬಸ್ಥರ ಜಂಟಿ ಆಶ್ರಯದಲ್ಲಿ 26ನೇ ವರ್ಷದ ಹತ್ತು ಕುಟುಂಬಗಳ, ಹದಿನೆಂಟು ಗೋತ್ರಗಳ ಗೌಡ ಕುಟುಂಬಗಳ ನಡುವಿನ ಕೆದಂಬಾಡಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಎ.ಎಸ್.ಶ್ರೀಧರ್ ಮಾತನಾಡಿ ಕ್ರೀಡಾಸ್ಪೂರ್ತಿ ಇದ್ದಲ್ಲಿ ಮಾತ್ರ ಕ್ರೀಡೆಯಲ್ಲಿ ಮುಂದುವರಿಯಲು ಸಾಧ್ಯ ಎಂದರು. ಕೆದಂಬಾಡಿ ಜಯಪ್ರಕಾಶ್ ಮಾತನಾಡಿ ಕೆದಂಬಾಡಿ ಕ್ರಿಕೆಟ್ ಕ್ಲಬ್ ಸತತ 25 ವರ್ಷಗಳಿಂದ ಯಶಸ್ವಿಯಾಗಿ ಕ್ರೀಡಾಕೂಟ ನಡೆಸಿಕೊಂಡು ಬರುತ್ತಿದ್ದು, ಪ್ರಸಕ್ತ ವರ್ಷದ ಕ್ರೀಡಾಕೂಟದಲ್ಲಿ 84 ತಂಡಗಳು ಭಾಗವಹಿಸಲಿವೆ ಎಂದರು.ವೇದಿಕೆಯಲ್ಲಿ ಕೆದಂಬಾಡಿ ಪ್ರಸನ್ನ ಕುಮಾರ್, ಕೆದಂಬಾಡಿ ಕೀರ್ತಿಕುಮಾರ್, ಕೆದಂಬಾಡಿ ನಂದಕುಮಾರ್, ಸುರೇಂದ್ರ, ಕೆ.ಡಿ.ರಮೇಶ್, ಗಣೇಶ್, ಬೆಳ್ಯಪ್ಪ ಮುಂತಾದವರು ಉಪಸ್ಥಿತರಿದ್ದರು. ಬಾಕಿಲನ ಮತ್ತು ಪಟ್ಟಡ ತಂಡಗಳ ನಡುವಿನ ಮೊದಲ ಪಂದ್ಯಕ್ಕೆ ಬೌಲಿಂಗ್ ಮಾಡುವದರ ಮೂಲಕ ಎ.ಎಸ್.ಶ್ರೀಧರ್ ಚಾಲನೆ ನೀಡಿದರು.
ಫಲಿತಾಂಶ
ಬಾಕಿಲನ ಹಾಗೂ ಪಟ್ಟಡ ನಡುವಿನ ಪಂದ್ಯದಲ್ಲಿ ಪಟ್ಟಡ ಜಯಗಳಿಸಿತು. ನಂಗಾರು ಮತ್ತು ಕುದುಕುಳಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುದುಕುಳಿ ತಂಡ ಜಯಗಳಿಸಿತು.
(ಮೊದಲ ಪುಟದಿಂದ) ಕರಕರನ ಮತ್ತು ಚೋಂಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೋಂಡಿರ ತಂಡ ಜಯಗಳಿಸಿತು. ಕುಲ್ಲಚೆಟ್ಟಿರ ತಂಡದ ವಿರುದ್ಧ ಪಟ್ಟಡ (ಬಿ) ತಂಡ ಸೋಲನುಭವಿಸಿತು. ಪರ್ಲಕೋಟಿ ಮತ್ತು ದೇವಾಯಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪರ್ಲಕೋಟಿ ಜಯಗಳಿಸಿತು. ಪಟ್ಟಡ (ಎ) ಮತ್ತು ಕುದುಕುಳಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುದುಕುಳಿ ಜಯಗಳಿಸಿತು. ಕುಲ್ಲಚೆಟ್ಟಿರ - ಚೋಂಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೋಂಡಿರ ಜಯಗಳಿಸಿತು. ಅಮ್ಮವನ ಹಾಗೂ ಪರ್ಲಕೋಟಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪರ್ಲಕೋಟಿ ತಂಡ ಜಯಗಳಿಸಿತು. ಪರ್ಲಕೋಟಿ - ಕುದುಕುಳಿ- ಚೋಂಡಿರ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ.