ಕಾಕೋಟುಪರಂಬು, ಏ. 20: ಹಾಕಿ ಕ್ರೀಡೆಯಲ್ಲಿ ಭವಿಷ್ಯದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಯುವ ಪೀಳಿಗೆಯವರು ಕಿರಿಯ ವಯಸ್ಸಿನಲ್ಲಿಯೇ ಉತ್ಸುಕತೆ ತೋರುವಂತಾಗಬೇಕು ಎಂದು ಹಾಕಿ ಕರ್ನಾಟಕ ಸಂಸ್ಥೆಯ ಕಾರ್ಯದರ್ಶಿ, ಮಾಜಿ ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಡಾ. ಅಂಜಪರವಂಡ ಬಿ. ಸುಬ್ಬಯ್ಯ ಅವರು ಕರೆ ನೀಡಿದರು.ಕಾಕೋಟುಪರಂಬುವಿನಲ್ಲಿ ಹಾಕಿಕೂರ್ಗ್ ಸಂಸ್ಥೆಯ ವತಿಯಿಂದ ಕೊಡವ ಕುಟುಂಬಗಳ ನಡುವೆ ಇಂದಿನಿಂದ ಶುಭಾರಂಭಗೊಂಡ ಕೊಡವ ಕೌಟುಂಬಿಕ ಕೂರ್ಗ್ ಚಾಂಪಿಯನ್ಸ್ ಟ್ರೋಫಿ ಹಾಗೂ ಕೊಡವ ಚಾಂಪಿಯನ್ಸ್ ಲೀಗ್ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆಟಗಾರರು ಕುಟುಂಬದ ಹೆಸರಿನಲ್ಲಿ ತಮ್ಮ ತಮ್ಮ ತಂಡವನ್ನು ಪ್ರತಿನಿಧಿಸುತ್ತಿರುವದು ಹೆಮ್ಮೆಯ ವಿಚಾರ ಎಂದ ಅವರು ಒಂದು ಕುಟುಂಬವಾಗಿ ಪಾಲ್ಗೊಳ್ಳಲು ಎಲ್ಲರೂ ಪ್ರೋತ್ಸಾಹ - ಉತ್ಸಾಹ ತೋರಬೇಕೆಂದರು. ಪ್ರಸ್ತುತ ರಾಷ್ಟ್ರೀಯ ಶಿಬಿರಗಳಲ್ಲಿ ಕೊಡಗಿನ ಹಲವು ಆಟಗಾರರು ಸೇರ್ಪಡೆಯಾಗಿದ್ದಾರೆ. ಜೂನಿಯರ್ ವಿಭಾಗದಲ್ಲೂ ಪ್ರತಿಭೆಗಳು ಬೆಳಕಿಗೆ ಬರುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಪೋಷಕರ ಬೆಂಬಲವೂ ಅಗತ್ಯವೆಂದು ಸುಬ್ಬಯ್ಯ ಅಭಿಪ್ರಾಯಪಟ್ಟರು.

ಅತಿಥಿಗಳಾಗಿದ್ದ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಅವರು ಮಾತನಾಡಿ ಒಲಂಪಿಕ್ಸ್‍ನಂತಹ ಪಂದ್ಯದಲ್ಲಿ ಕಂಡುಬರುವ ಪೈಪೋಟಿ ಇಲ್ಲಿ ಕಂಡುಬರಬೇಕು. ಕ್ರೀಡಾಸ್ಫೂರ್ತಿಯೂ ಕಾಣು ವಂತಾಗಬೇಕು. ವೇಗದ ಆಟದಲ್ಲಿ ಉದ್ವೇಗಗೊಳ್ಳಬಾರದು. ಗುಣಮಟ್ಟದ ಪ್ರದರ್ಶನವಿರಬೇಕೆಂದು ಹೇಳಿದರು.

ವಿಶೇಷ ಪೂಜೆ

ಪಂದ್ಯಾಟಕ್ಕೆ ಮುನ್ನ ಪಂದ್ಯಾವಳಿಯ ಯಶಸ್ಸಿಗೆ ಪ್ರಾರ್ಥಿಸಿ ಸ್ಥಳೀಯ ಕಾಲಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹಾಕಿ ಕೂರ್ಗ್‍ನ ಪದಾಧಿಕಾರಿಗಳು, ಸ್ಥಳೀಯ ಕ್ರೀಡಾಭಿಮಾನಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಅತಿಥಿಗಳನ್ನು ಸ್ವಾಗತಿಸುವದರೊಂದಿಗೆ ಏಕಕಾಲಕ್ಕೆ ಎರಡು ವಿಭಿನ್ನ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಪಂದ್ಯಾವಳಿ ನಿರ್ದೇಶಕರಾದ ಮೊಳ್ಳೇರ ಸುಬ್ಬಯ್ಯ, ಬೆಳೆಗಾರ ಮುದ್ದುರ ತಮ್ಮಯ್ಯ, ಕಾಕೋಟುಪರಂಬು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಮೇವಡ ಚಿಣ್ಣಪ್ಪ, ಹಾಕಿ ಕೂರ್ಗ್ ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ, ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಂಗಪ್ಪ, ಪಳಂಗಂಡ ಲವಕುಮಾರ್, ಮೇಕೇರಿರ ಪೆಮ್ಮಯ್ಯ, ಐನಂಡ ಲಾಲಾ ಅಯ್ಯಣ್ಣ, ನೆಲ್ಲಮಕ್ಕಡ ಪವನ್, ಕೊಕ್ಕಂಡ ರೋಷನ್ ಮತ್ತಿತರರು ಪಾಲ್ಗೊಂಡಿದ್ದರು. ಎ.ಬಿ. ಸುಬ್ಬಯ್ಯ ಅವರು ದೀಪ ಬೆಳಗಿಸಿದರೆ ಕರ್ನಲ್ ಸುಬ್ಬಯ್ಯ ಅವರು ಚೆಂಡನ್ನು ತಳ್ಳುವ ಮೂಲಕ ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ ನೀಡಿದರು. ಅಜ್ಜಮಾಡ ಚಂಗಪ್ಪ ನಿರೂಪಿಸಿದರು. ಮೇವಡ ಕಲ್ಪತಾ ರಮೇಶ್ ಪ್ರಾರ್ಥಿಸಿ, ಪುಟ್ಟಿಚಂಡ ಡಯನಾ ಸೋಮಯ್ಯ ಸ್ವಾಗತಿಸಿದರು. ಕಂಬೀರಂಡ ದಿವ್ಯ ಮುತ್ತಪ್ಪ ವಂದಿಸಿದರು.

-ಪಿ.ಯು.ಸಿ./ ಸುದ್ದಿಪುತ್ರ.